ದೇವದುರ್ಗ: ಅತ್ಯಂತ ಹಿಂದುಳಿತ ತಾಲೂಕಿನಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಎರಡೆರಡು ಟೋಲ್‌ಗೇಟ್ ಆರಂಭಿಸಿದ್ದರಿಂದ ಜನಾಕ್ರೋಶ ವ್ಯಕ್ತವಾಗಿದ್ದು, ಕೊನೆಗೂ ಸಂಸದ ಜಿ.ಕುಮಾರ ನಾಯಕ ಎಚ್ಚೆತ್ತುಕೊಂಡಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಗೆ ಪತ್ರ ಬರೆದಿರುವ ಕುಮಾರ ನಾಯಕ, ಟೋಲ್‌ಗೇಟ್ ರದ್ದುಮಾಡುವಂತೆ ಮನವಿ ಮಾಡಿದ್ದಾರೆ.

ತಾಲೂಕಿನ ಕಾಕರಗಲ್ ಟೋಲ್‌ಗೇಟ್ ಮುಂದೆ ಫೆ.28ರಂದು ರೈತ ಸಂಘ ಪ್ರತಿಭಟನೆ ನಡೆಸಿದ್ದರಿಂದ ಅಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ಜಿ.ಕುಮಾರನಾಯಕ, ಟೋಲ್‌ಗೇಟ್ ರದ್ದುಮಾಡುವ ಭರವಸೆ ನೀಡಿದ್ದರು. ಆದರೆ, ಎರಡು ತಿಂಗಳು ಕಳೆದರೂ ಯಾವುದೇ ಕ್ರಮಕೈಗೊಂಡಿರಲಿಲ್ಲ. ಏ.21ರಂದು ಎರಡೂ ಗೇಟ್‌ನಲ್ಲಿ ಸದ್ದಿಲ್ಲದೆ ಟೋಲ್ ವಸೂಲಿ ಮಾಡಲಾಯಿತು. ಏ.22ರಂದು ವಿಜಯವಾಣಿ ‘ಸದ್ದಿಲ್ಲದೆ ಟೋಲ್ ವಸೂಲಿ ಆರಂಭ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಸಂಸದ ಜಿ.ಕುಮಾರ ನಾಯಕ ಲೋಕೋಪಯೋಗಿ ಸಚಿವರಿಗೆ ಪತ್ರ ಬರೆದು, ಎರಡೂ ಟೋಲ್‌ಗೇಟ್ ರದ್ದುಮಾಡುವಂತೆ ಮನವಿ ಮಾಡಿದ್ದಾರೆ.
ಇನ್ನು ಎರಡು ತಿಂಗಳಿನಿಂದ ಸೈಲೆಂಟ್ ಆಗಿದ್ದ ಶಾಸಕಿ ಕರೆಮ್ಮ ನಾಯಕ ಮಂಗಳವಾರ ಎಚ್ಚೆತ್ತು ಟೋಲ್‌ಗೇಟ್ ರದ್ದು ಮಾಡಲು ಹೋರಾಟ ನಡೆಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇನ್ನೊಂದೆಡೆ ರೈತ ಸಂಘದ ಮುಖಂಡರು ಟೋಲ್‌ಗೇಟ್ ರದ್ದತಿಗೆ ಎರಡನೇ ಹಂತದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ. ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ನಡೆಸಲು ಮುಂದಾಗಿದ್ದಾರೆ. ಅಧಿಕಾರಿಗಳು ಮಾತ್ರ ಈ ಬಗ್ಗೆ ಸರ್ಕಾರದ ಕಡೆ ಬೊಟ್ಟುಮಾಡಿ ತೋರಿಸುತ್ತಿದ್ದಾರೆ. ಜನರ ಆತಂಕ ಮುಂದುವರಿದಿದ್ದು ಕೇಳುವವರಿಲ್ಲದಂತಾಗಿದೆ.