ದೇವದುರ್ಗ ಗ್ರಾಮೀಣ: ತಾಲೂಕಿನ ತಿಂಥಿಣಿ ಬ್ರಿಡ್ಜ್‌ನ ಶೀಕನಕಗುರುಪೀಠದಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಪ್ರದರ್ಶನ ಕಂಡ ವರಾಹ ಪುರಾಣ ನಾಟಕ ಪ್ರೇಕ್ಷಕರ ಮನ ಗೆದ್ದಿತು.
ಕೊರವ ಸಮುದಾಯ ಸಾಮಾಜಿಕ ಹಾಗೂ ಆರ್ಥಿಕವಾಗಿ ತುಳಿತಕ್ಕೆ ಒಳಗಾಗಿ ಸಮಾಜದಲ್ಲಿ ಅನುಭವಿಸುವ ನೋವು, ಸಂಕಷ್ಟ, ಕಿರುಕುಳ ಪ್ರತಿಭಿಂಬಿಸುವ ವರಾಹ ಪುರಾಣ ನೋಡುಗರ ಕಣ್ಣು ತೇವಗೊಳಿಸಿದವು. ಹಂದಿ ಸಾಕಣೆ ಮಾಡುವ ಸಮುದಾಯವನ್ನು ಸಮಾಜ ನೋಡುವ ದೃಷ್ಟಿಕೋನ ಹಾಗೂ ಕತ್ತಲಲ್ಲಿ ಕಳೆಯುವ ಅವರ ಜೀವನದ ಜಂಜಾಟವನ್ನು ಕಲಾವಿದರು ಎಳೆಎಳೆಯಾಗಿ ಬಿಚ್ಚಿಟ್ಟರು.
ನಾಟಕ ಸಾಹಿತಿ ಜಂಬಣ್ಣ ಅಮರಚಿಂತ ಕಾದಂಬರಿ ಆಧಾರಿತವಾಗಿದ್ದು, ಸಿದ್ದರಾಮ ಕೊಪ್ಪರ್ ಅವರು ರಂಗರೂಪ, ನಿರ್ದೇಶನ ಮಾಡಿದ್ದರು. ಕಲಾವಿದರಾದ ಸೂರ್ಯಕಾಂತಿ ಗುಣಕಿಮಠ, ಸಿತಾರ, ಕಲಾವತಿ, ಸಂತೋಷ, ಪವನ್, ಪ್ರದೀಪ್ ಅಭಿನಯ ಗಮನ ಸೆಳಯಿತು. ಇದಕ್ಕೂ ಮುನ್ನ ನಡೆದ ವಿವಿಧ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಳಿಸಿದವು. ಬಾದಿಮನಾಳದ ಶ್ರೀಲಿಂಗಬೀರದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.