ಜಾಲಹಳ್ಳಿ ಪೆಟ್ರೋಲ್ ಬಂಕ್ ಬಳಿ ಮರಳಿನ ಲಾರಿ ಹರಿದು 10 ಕುರಿ ಸಾವು

ಸುಮಾರು 1.20 ಲಕ್ಷ ರೂ. ನಷ್ಟ | ಕರಡಿಗುಡ್ಡದ ಮರಿಗಪ್ಪಗೆ ಸೇರಿದ ಕುರಿಗಳು

ದೇವದುರ್ಗ ಗ್ರಾಮೀಣ: ತಾಲೂಕಿನ ಜಾಲಹಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಮುಂದೆ ಹೋಗುತ್ತಿದ್ದ ಕುರಿಗಳ ಮೇಲೆ ಮರಳು ತುಂಬಿದ ಲಾರಿ ಹರಿದ ಪರಿಣಾಮ 10 ಕುರಿಗಳು ಮಂಗಳವಾರ ಸಂಜೆ ಸತ್ತಿವೆ.

ಕರಡಿಗುಡ್ಡ ಗ್ರಾಮದ ಕುರಿಗಾಹಿ ಮರಿಗಪ್ಪಗೆ ಸೇರಿದ ಕುರಿಗಳಾಗಿದ್ದು, ಸುಮಾರು 1.20 ಲಕ್ಷ ರೂ. ಗೂ ಅಧಿಕ ನಷ್ಟವಾಗಿದೆ. ಘಟನೆಯಿಂದ ರಸ್ತೆ ತುಂಬೆಲ್ಲ ರಕ್ತ ಹರಿದಿದ್ದು, ಎಲ್ಲಂದರಲ್ಲಿ ಕುರಿಯ ಮಾಂಸ ಬಿದ್ದು, ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು.

ಲಾರಿ ಚೇಸ್: ರಸ್ತೆಬದಿ ಹೋಗುತ್ತಿದ್ದ ಕುರಿಗಳ ಮೇಲೆ ಲಾರಿ ಹರಿಸಿದ ಚಾಲಕ ವಾಹನ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಬೈಕ್ ಮೂಲಕ ಹಿಂಬಾಲಿಸಿ ಸಿನಿಮೀಯ ರೀತಿಯಲ್ಲಿ ಲಾರಿ ತಡೆದು, ಚಾಲಕನನ್ನು ಸೆರೆಹಿಡಿದಿದ್ದಾರೆ.

ವೇಗ ನಿಯಂತ್ರಿಸಿ: ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮರಳು ಅಕ್ರಮ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಮರಳು ತುಂಬಿದ ಲಾರಿಗಳು ವೇಗ ನಿಯಂತ್ರಣ ಮೀರಿ ಓಡಾಡುತ್ತಿವೆ. ಇದರಿಂದ ಜನ ಜಾನುವಾರುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ತಡೆಯಬೇಕು. ಪರವಾನಗಿ ಇರುವ ಲಾರಿಗಳಿಗೆ ಕಡ್ಡಾಯವಾಗಿ ವೇಗ ನಿಯಂತ್ರಣ ಸಾಧನ ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *