ಮದ್ಯ ಅಕ್ರಮ ಮಾರಾಟ ನಿಯಂತ್ರಿಸಿ

 ತಹಸೀಲ್ದಾರ್‌ಗೆ ದಸಂಸ ಮನವಿ

ದೇವದುರ್ಗ ಗ್ರಾಮೀಣ: ತಾಲೂಕಿನ ಪಲಕನಮರಡಿ ಗ್ರಾಪಂ ವ್ಯಾಪ್ತಿಯ ಮೂಡಲಗುಂಡದಲ್ಲಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ತಡೆಗೆ ಒತ್ತಾಯಿಸಿ ಪಟ್ಟಣದಲ್ಲಿ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ದಲಿತ ಸಂಘರ್ಷ ಸಮಿತಿ, ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರು ಬುಧವಾರ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ಹೆಚ್ಚಾಗಿದೆ. ಮದ್ಯ ಸೇವನೆಯಿಂದ ಯುವಕರು ದುಷ್ಚಟಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮದ್ಯ ವ್ಯಸನಿಗಳಿಂದ ಹಲವು ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಗ್ರಾಮದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ನಿತ್ಯ ಒಂದಿಲ್ಲ ಒಂದು ಜಗಳ ನಡೆಯುತ್ತಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರುತ್ತೇವೆ. ಅಕ್ಕಪಕ್ಕದ ಹಳ್ಳಿಗಳಾದ ಪಲಕನಮರಡಿ, ವಂದಲಿ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ನಿಷೇಧ ಮಾಡಲಾಗಿದೆ. ನಮ್ಮ ಊರಿನಲ್ಲಿ ಮದ್ಯ ಅಕ್ರಮ ಮಾರಾಟ ನಿಂತಿಲ್ಲ ಎಂದು ಆರೋಪಿಸಿದರು.

ಮದ್ಯ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ಮಾಡಿದರೆ ಗ್ರಾಮಸ್ಥರು ಹಾಗೂ ಮಹಿಳೆಯರು, ಮಕ್ಕಳೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪಲಕನಮರಡಿ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ್, ದಲಿತ ಸಂಘಟನೆಗಳ ಮುಖಂಡರಾದ ಮೇಲಪ್ಪ ಬಾವಿಮನಿ, ಹನುಮಂತ ಮನ್ನಾಪುರಿ, ಶಿವಪ್ಪ ಪಲಕನಮರಡಿ, ಮಲ್ಲಿಕಾರ್ಜುನ ಜೊಂಡೆ ಇತರರಿದ್ದರು.

Leave a Reply

Your email address will not be published. Required fields are marked *