ಗಲಗ ಶ್ರೀಚನ್ನಬಸವೇಶ್ವರ ಜಾತ್ರೆಗೆ ಚಾಲನೆ, ಉಸುಕಿನ ಚೀಲ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಇಂದು
ದೇವದುರ್ಗ ಗ್ರಾಮೀಣ: ತಾಲೂಕಿನ ಆರಾಧ್ಯ ದೈವ ಗಲಗ ಆರೂಢ ಮಠದ ಶ್ರೀಚನ್ನಬಸವೇಶ್ವರ ಜಾತ್ರಾ (ಸೇವಾ) ಮಹೋತ್ಸವಕ್ಕೆ ಬಸವರಾಜಪ್ಪ ತಾತ ಪೂಜಾರಿ ಶುಕ್ರವಾರ ನಾಗರಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ನಾಲ್ಕು ದಿನಗಳ ನಡೆಯುವ ಜಾತ್ರಾ ಮಹೋತ್ಸವ ನೈವೇದ್ಯ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೆಳಗ್ಗೆ ಶ್ರೀಗಂಗಾಧರಪ್ಪ ಸ್ವಾಮೀಜಿ ಅವರ ನೇತೃತ್ವದಲ್ಲಿ ಬಸವರಾಜಪ್ಪ ತಾತ ಹಾಗೂ ಅಯ್ಯಣ್ಣ ತಾತ ವಿಶೇಷ ಪೂಜೆ ಸಲ್ಲಿಸಿದರು. ನಂತರ ಭಕ್ತರ ನಡುವೆ ನಾಗರಿ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು.
ನಂತರ ಸಂಜೆ ವೇಳೆ ಭಕ್ತರು ಹೋಳಿಗೆ, ಮಾದಲಿ, ಕರಗಡಬು ಸೇರಿ ವಿವಿಧ ಸಿಹಿ ಪದಾರ್ಥಗಳನ್ನು ತಯಾರಿಸಿ, ದೇವರಿಗೆ ನೈವೇದ್ಯ ಅರ್ಪಿಸಿ, ಭಕ್ತಿಭಾವ ಮೆರೆದರು. ಕಾರ್ಯಕ್ರಮದಲ್ಲಿ ಗಲಗ, ಕಜ್ಜಿಬಂಡಿ, ಮುಂಡರಗಿ, ಗಣಜಿಲಿ ಸೇರಿ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಯುವಕರ ಸ್ಪರ್ಧೆ ಇಂದು: ಜಾತ್ರಾ ಮಹೋತ್ಸವ ನಿಮಿತ್ತ ನ.23ರಂದು ಮಧ್ಯಾಹ್ನ 3ಕ್ಕೆ ಗ್ರಾಮದ ಯುವಕರು ಉಸುಕಿನ ಚೀಲ ಹಾಗೂ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಆಯೋಜಿಸಿದ್ದಾರೆ. ಪ್ರಥಮ ಬಹುಮಾನ ಬೆಳ್ಳಿ ಕಡಗ, ದ್ವಿತೀಯ ಬಹುಮಾನ 1100 ರೂ. ನಗದು ಬಹುಮಾನವಿದೆ. ಇದಕ್ಕಾಗಿ ಆವರಣ ಸ್ವಚ್ಛಗೊಳಿಸಿ, ಸಂಗ್ರಾಣಿ ಕಲ್ಲುಗಳು ಹಾಗೂ ಉಸುಕು ತುಂಬಿದ ಚೀಲ ಸಿದ್ಧ ಮಾಡಲಾಗಿದೆ. ಇದಕ್ಕು ಮುನ್ನ ಶ್ರೀಗಂಗಾಧರಪ್ಪ ಸ್ವಾಮೀಜಿ ನೇತೃತ್ವದಲ್ಲಿ ನ.23ರಂದು ಬಸವರಾಜಪ್ಪ ತಾತ ಧೂಳುಗಾಯಿ ಕಾರ್ಯಕ್ರಮ ನೆರವೇರಿಸುವರು. ಬೆಳಗ್ಗೆ 4.30ಕ್ಕೆ ವಚನಗಳ ನುಡಿಗಳನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ನಡೆಸಲಾಗುತ್ತದೆ.