ನೀರಿನ ಪ್ರಮಾಣ ಇಳಿಕೆ, ದೂರವಾಗದ ಆತಂಕ
ದೇವದುರ್ಗ ಗ್ರಾಮೀಣ: ಕೃಷ್ಣಾ ನದಿ ನೀರಿನಿಂದ ಮುಳುಗಡೆ ಭೀತಿ ಹೊಂದಿದ್ದರೂ ಸ್ಥಳಾಂತರವಾಗಲು ನಿರಾಕರಿಸಿದ ತಾಲೂಕಿನ ಅಂಜಳ ಗ್ರಾಮಕ್ಕೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಬುಧವಾರ ಸಂಜೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಟ್ಟಿಬೆಳೆದ ಮನೆಯನ್ನು ನಾವು ಬೀಡಲ್ರಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ ಗ್ರಾಮಸ್ಥರ ಜತೆ ತಹಸೀಲ್ದಾರ್ ಹಾಗೂ ತಾಪಂ ಇಒ ಸಿದ್ದಪ್ಪ ಪೂಜಾರಿ ಚರ್ಚಿಸಿ, ಮನವೊಲಿಸಿದರು. ನಂತರ ಸಂಜೆ ವೇಳೆ ಎಂಟು ಕುಟುಂಬಗಳನ್ನು ಅದೇ ಗ್ರಾಮದ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 8 ಕುಟುಂಬದ ಸುಮಾರು 50 ಜನರಿಗೆ ಪರಿಹಾರ ಕೇಂದ್ರ ತೆರೆದಿದ್ದು, ಆರೋಗ್ಯ ತಪಾಸಣೆ ಜತೆಗೆ ಪಡಿತರ ಧಾನ್ಯ ವಿತರಿಸಲಾಗಿದೆ. ಅಧಿಕಾರಿಗಳ ಮನವೊಲಿಕೆ ನಂತರ ಗ್ರಾಮದ ಎಂಟು ಕುಟುಂಬಗಳು ಜಾನುವಾರು ಜತೆಗೆ ಮನೆಯ ವಸ್ತುಗಳು, ದನದ ಮೇವು ಟ್ರ್ಯಾಕ್ಟರ್ನಲ್ಲಿ ಬೇರೆಡೆ ಸ್ಥಳಾಂತರ ಮಾಡಿದರು.
ಬುಧವಾರ ತಡರಾತ್ರಿ ಸುಮಾರು 4.50 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಿದ್ದರಿಂದ ಗುರುವಾರ ಬೆಳಗ್ಗೆ ತಾಲೂಕಿನ ಹೂವಿನಹೆಡಗಿ, ನಿಲುವಂಜಿ, ಕೊಪ್ಪರ ಸೇರಿ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ನೀರು ನುಗ್ಗಿದೆ. ಅಲ್ಲದೆ ಐತಿಹಾಸಿಕ ನಾಲ್ಕೈದು ದೇವಸ್ಥಾನಗಳು ಮುಳುಗಡೆಯಾಗಿದ್ದು, ಪೂಜಾ ಕೈಂಕರ್ಯ ಬಂದ್ ಮಾಡಲಾಗಿದೆ. ನೆರೆಪೀಡಿತ ಗ್ರಾಮಗಳಿಗೆ ಅಧಿಕಾರಿಗಳ ತಂಡ ಆಗಾಗ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡುತ್ತಿದೆ.