ಶುದ್ಧ ಕುಡಿವ ನೀರು ಪೂರೈಸಿ

ತಹಸಿಲ್ ಕಚೇರಿ ಮುಂದೆ ಚಿಕ್ಕಬೂದೂರು ಗ್ರಾಮಸ್ಥರ ಪ್ರತಿಭಟನೆ

ದೇವದುರ್ಗ: ಶುದ್ಧ ಕುಡಿವ ನೀರು ಪೂರೈಸುವಂತೆ ಆಗ್ರಹಿಸಿ ಚಿಕ್ಕಬೂದೂರು ಗ್ರಾಮಸ್ಥರು ಸೋಮವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಜೇರಬಂಡಿ ಗ್ರಾಪಂ ವ್ಯಾಪ್ತಿಗೆ ಬರುವ ಚಿಕ್ಕಬೂದೂರು ಗ್ರಾಮದಲ್ಲಿ ಕಳೆದ 20 ದಿನಗಳಿಂದ ಶುದ್ಧ ಕುಡಿವ ನೀರು ಪೂರೈಸುತ್ತಿಲ್ಲ. ಇದರಿಂದ ಜನರು ಕುಡಿವ ನೀರಿಗಾಗಿ ಪರದಾಡುವಂತಾಗಿದೆ. ಈ ಕುರಿತು ಗ್ರಾಪಂ ಅಧಿಕಾರಿಗಳಿಗೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಶುದ್ಧ ನೀರು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಗ್ರಾಮದಲ್ಲಿ ಇರುವ ಕಿರುನೀರು ಸರಬರಾಜು ಯೋಜನೆ ಇದ್ದೂ ಇಲ್ಲದಂತಾಗಿದೆ. ಜಿಪಂನಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕುಡಿವ ನೀರಿನ ಟ್ಯಾಂಕ್ ನಿರ್ಮಿಸಿ, ನದಿಯಿಂದ ಪೈಪ್‌ಲೈನ್ ಅಳವಡಿಸಿದ್ದು, ಈವರೆಗೆ ನೀರು ಪೂರೈಕೆಗೆ ಕ್ರಮಕೈಗೊಂಡಿಲ್ಲ. ಹೀಗಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅನಿವಾರ್ಯವಾಗಿ ಆರ್ಸೆನಿಕ್ ಅಂಶ ಹೆಚ್ಚಿರುವ ಬೋರ್‌ವೆಲ್ ನೀರು ಕುಡಿದು ರೋಗಗಳಿಗೆ ತುತ್ತಾಗುವಂತಾಗಿದೆ. ಈ ಕುರಿತು ಾಸಕರು, ಜಿಪಂ, ಗ್ರಾಪಂ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಮಕ್ಕೆ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ತಹಸೀಲ್ದಾರ್ ಮಂಜುನಾಥ ಹಿರೇಮಠಗೆ ಮನವಿ ಸಲ್ಲಿಸಿದರು.

ಮುಖಂಡರಾದ ವೀರಭದ್ರಪ್ಪ, ಹನುಮಂತಪ್ಪ ಕಾಕರಗಲ್, ಶಿವಪ್ಪ ಪಲಕನಮರಡಿ, ಸಂಗಯ್ಯ ಸ್ವಾಮಿ, ಚಂದ್ರಕಾಂತ ಪಾಟೀಲ್, ಮಲ್ಲಿರ್ಕಾಜುನ, ಬಸವರಾಜ, ಚಿನ್ನರಡ್ಡಿ, ಭಾನುಪ್ರಕಾಶ, ಮುರಿಗೇಶ ಇದ್ದರು.