ಊಟ ಬಹಿಷ್ಕರಿಸಿ ಪ್ರತಿಭಟನೆ

ಮೇಲ್ವಿಚಾರಕಿ ಬದಲಾವಣೆಗೆ ಪಟ್ಟು | ಕಳಪೆ ಆಹಾರ ವಿತರಣೆ

ದೇವದುರ್ಗ: ಪಟ್ಟಣದ ನಸ್ರತ್ ಕಾಲನಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿಯ ಪದವಿ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಊಟ ಬಹಿಷ್ಕರಿಸಿ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು.

ನಿಲಯದ ಮೇಲ್ವಿಚಾರಕಿ ಲೀಲಾವತಿ ಮತ್ತು ಆಕೆ ಪತಿ ಬಸವರಾಜ ಅಕ್ಕರಿಕಿ ರಾತ್ರಿ ವೇಳೆ ಹಾಸ್ಟೆಲ್‌ಗೆ ಬಂದು ತೊಂದರೆ ನೀಡುತ್ತಾರೆ, ಸಿಸಿಟಿವಿಯ ದೃಶ್ಯಾವಳಿಗಳನ್ನು ವೀಕ್ಷಿಸಿ ತೆಗೆದು ಹಾಕುತ್ತಿದ್ದಾರೆ. ಸಾಂಬರಗೆ ಕೊಳೆತ ತರಕಾರಿ ಬಳಸುವುದು, ಅರ್ಧಬೆಂದ ಅನ್ನ ನೀಡುತ್ತಿದ್ದಾರೆ. ಅಗತ್ಯ ಸೌಲಭ್ಯ ಕೇಳಿದರೆ ನಿಲಯದಿಂದ ಹೊರ ಹಾಕುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿನಿಯರು ಕೂಡಲೇ ಮೇಲ್ವಿಚಾರಕಿ ಲೀಲಾವತಿಯನ್ನು ಬದಲಾವಣೆ ಮಾಡಬೇಕೆಂದು ಪಟ್ಟು ಹಿಡಿದರು.

ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಭೇಟಿ: ವಿಷಯ ತಿಳಿದು ಬುಧವಾರ ಬೆಳಗ್ಗೆ ಹಾಸ್ಟೆಲ್‌ಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಪ್ರಶಾಂತ, ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಮೇಲ್ವಿಚಾರಕಿ ಲೀಲಾವತಿಯನ್ನು ಬದಲಾವಣೆ ಮಾಡಿ, ಗಬ್ಬೂರು ವಸತಿ ನಿಲಯದ ಮೇಲ್ವಿಚಾರಕಿ ಲಕ್ಷ್ಮಿ ಪ್ರಭಾರರಾಗಿ ನೇಮಿಸಲಾಗುವುದು. ಉಳಿದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದ ನಂತರ ವಿದ್ಯಾರ್ಥಿನಿಯರು ಉಪಹಾರ ಸೇವಿಸಿದರು.

Leave a Reply

Your email address will not be published. Required fields are marked *