ದೇವದುರ್ಗ: ಉದ್ಯೋಗ ಅರಸಿ ಮಹಾರಾಷ್ಟ್ರದ ಪುಣೆಗೆ ದುಡಿಯಲು ಗುಳೆ ಹೋಗಿದ್ದ ತಾಲೂಕಿನ ಸುಮಾರು 10 ತಾಂಡಾಗಳ ಕೂಲಿಕಾರರು ಕರೊನಾ ಭೀತಿ ಹಿನ್ನೆಲೆಯಲ್ಲಿ ಶನಿವಾರ ಸಂಜೆ ತಮ್ಮ ತಾಂಡಾಗಳಿಗೆ ವಾಪಸ್ ಆಗಿದ್ದರಿಂದ ಭಾನುವಾರ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ತಾಂಡಾಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಮಹಾರಾಷ್ಟ್ರದಲ್ಲಿ ಕರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕೂಲಿಕಾರರು ಆರೋಗ್ಯ ತಪಾಸಣೆಗೆ ಒಳಗಾಗದೇ ನೇರವಾಗಿ ತಾಂಡಾಗಳಿಗೆ ಲಾರಿಗಳಲ್ಲಿ ವಾಪಸ್ ಆಗಿದ್ದರು. ಇದು ತಾಂಡಾದ ಜನರಿಗೆ ಮಾತ್ರವಲ್ಲ ತಾಲೂಕಿನ ಜನರಲ್ಲೂ ಆತಂಕ ಉಂಟುಮಾಡಿತ್ತು. ಪುಣೆಯಿಂದ ವಾಪಸ್ ಆದ ಕೂಲಿಕಾರರ ಕುರಿತು ಗ್ರಾಮಸ್ಥರೇ ತಾಲೂಕು ಸೇರಿ ಜಿಲ್ಲಾಧಿಕಾರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ 10 ತಾಂಡಾಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮದಲ್ಲಿ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಿತು. ಕೂಲಿಕಾರರನ್ನು ಥರ್ಮಲ್ ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಮುಂಜಾಗ್ರತೆ ಕ್ರಮವಾಗಿ ಗ್ರಾಮಕ್ಕೆ ವಾಪಸ್ ಆದ ಜನರು ಬೇರೆ ಸ್ಥಳಕ್ಕೆ ಹೋಗದೆ, ನಿರಂತರವಾಗಿ ಆರೋಗ್ಯ ತಪಾಸಣೆ ಒಳಗಾಗುವಂತೆ ಸೂಚನೆ ನೀಡಲಾಯಿತು.