ದೇವದುರ್ಗ: ಕನ್ನಡ ಸಾಹಿತ್ಯ ಪರಿಷತ್ ನಾಡಿನ ಸಾಹಿತ್ಯ, ಸಂಸ್ಕೃತಿ, ಕಲೆ, ಜಾನಪದ ಉಳಿಸಿ ಬೆಳೆಸುವ ಜತೆಗೆ ಸಾಂಸ್ಕೃತಿಕ ಶ್ರೀಮಂತಿಕೆಗೆ ಎತ್ತಿಹಿಡಿದಿದೆ. ನಾಡಿನ ಅಭಿವೃದ್ಧಿಗೂ ತನ್ನದೆಯಾದ ಸೇವೆ ನೀಡಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.
ಪಟ್ಟಣದ ಶಾಂತಿನಗರದಲ್ಲಿ ಕಸಾಪ ಹಾಗೂ ಹಗಲುವೇಷ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 109ನೇ ಸಂಸ್ಥಾಪನಾ ದಿನ ಆಚರಣೆಯ ಅಧ್ಯಕ್ಷತೆವಹಿಸಿ ಶುಕ್ರವಾರ ಮಾತನಾಡಿದರು.
109ನೇ ಸಂಸ್ಥಾಪನೆ ದಿನ ಆಚರಣೆ
ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಂದ ಸ್ಥಾಪನೆಯಾದ ಸಾಹಿತ್ಯ ಪರಿಷತ್ ಇಂದು 109ನೇ ಸಂಸ್ಥಾಪನೆ ದಿನ ಆಚರಿಸಿಕೊಳ್ಳುತ್ತಿದೆ. ಒಂದು ಶತಮಾನದಿಂದ ನಾಡಿನ ಹಿರಿಮೆ-ಗರಿಮೆಗೆ ಶ್ರಮಿಸುತ್ತಿದೆ. ಪ್ರತಿವರ್ಷ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದಕ್ಕೊಂದು ನಿದರ್ಶನವಾಗಿದೆ ಎಂದರು.
ಕಾಲಕ್ಕೆ ತಕ್ಕಂತೆ ಬದಲಾವಣೆ
ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೈನುದ್ದೀನ್ ಕಾಟಮಳ್ಳಿ ಮಾತನಾಡಿ, ಕಸಾಪ ಕನ್ನಡ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ಜಾನಪದ ಕಲೆ ಉಳಿಸುವ ಜತೆಗೆ ಬೆಳೆಸಿಕೊಂಡು ಹೋಗುತ್ತಿದೆ. ಯುವ ಮನಸ್ಸುಗಳಿಗೆ ಇನ್ನೂ ಹೆಚ್ಚಿನ ಆದ್ಯತೆ ಸಿಗಬೇಕಿದೆ. ಪರಿಷತ್‌ನಲ್ಲಿ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ: ಈಗ ರೀಲ್ಗಳನ್ನು ಕಸ್ಟ್ಮೈಸ್ ಮಾಡಬಹುದು…! ಏನಿದು ಹೊಸ ಫೇಸ್‌ಬುಕ್ ಆಯ್ಕೆ?
ಉಪನ್ಯಾಸಕ ಶಿವರಾಜ್ ರುದ್ರಾಕ್ಷಿ ಮಾತನಾಡಿದರು. ಅಜೀವ ಸದಸ್ಯ ಚಿದಾನಂದಪ್ಪ ಶಿವಂಗಿ, ಹನುಮಂತಪ್ಪ ಮನ್ನಾಪುರ, ಮಾಕರ್ಂಡಯ್ಯ ನಾಡದಾಳ್, ಎಚ್.ಡಿ.ಶಿವರಾಜ್, ಹಗಲುವೇಷ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಈರಣ್ಣ ರುದ್ರಾಕ್ಷಿ, ಜಂಬಣ್ಣ ಗೋಪಾಲ್ ರುದ್ರಾಕ್ಷಿ, ಹೂನಯ್ಯ, ಪ್ರಕಾಶ್ ರೆಡ್ಡಿಗೌಡ, ರವಿಕುಮಾರ್ ಬಲ್ಲಿದವ್, ಅಬ್ದುಲ್ ಇತರರಿದ್ದರು.