ಗಬ್ಬೂರಿನ ಸಾವಿತ್ರಮ್ಮ ಜಮೀನಿನಲ್ಲಿ ಶಾಲೆ ನಿರ್ಮಾಣ ದೂರು ಹಿನ್ನೆಲೆ, ವಿವಾದಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಿರ್ಮಿಸುತ್ತಿರುವ ಮುರಾರ್ಜಿ ವಸತಿ ಶಾಲೆ ಕಟ್ಟಡ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಶರತ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುರಾರ್ಜಿ ವಸತಿ ಶಾಲೆ ನಿರ್ಮಿಸುತ್ತಿರುವ ಭೂಮಿಯನ್ನು 30 ವರ್ಷಗಳ ಹಿಂದೆ ಸರ್ಕಾರ ತಮಗೆ ಮಂಜೂರು ಮಾಡಿದ್ದು, ಅದನ್ನು ಶಾಲೆಗೆ ನೀಡಲಾಗಿದೆ ಎಂದು ಗ್ರಾಮದ ಸಾವಿತ್ರಮ್ಮ ಎಂಬುವವರು ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಸಾವಿತ್ರಮ್ಮಗೆ ಕಲ್ಲು ಗಣಿಗಾರಿಕೆ ನಡೆಸಲಾದ ಪಕ್ಕದ ಭೂಮಿ ಮಂಜೂರು ಮಾಡಲಾಗಿತ್ತು ಎಂದು ಹೇಳಿದ್ದರಿಂದ ವಿವಾದ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಬಿ.ಶರತ್, ಜಿಪಂ ಸಿಇಒ ನಲಿನ್ ಅತುಲ್, ಸಹಾಯಕ ಆಯುಕ್ತೆ ಶಿಲ್ಪಾ ಶರ್ಮಾ ದಾಖಲೆ ಪರಿಶೀಲನೆ ನಡೆಸಿ, ಅಧಿಕಾರಿಗಳು ಹಾಗೂ ಸಾವಿತ್ರಮ್ಮರ ಹೇಳಿಕೆ ಪಡೆದುಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ ಶರತ್, ಸಾವಿತ್ರಮ್ಮಗೆ ಸರ್ವೇ ನಂ.896ರಲ್ಲಿ 3 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಆದರೆ, ಅವರು ತಪ್ಪು ಗ್ರಹಿಕೆಯಿಂದ ಸರ್ವೇ ನಂ.893ರಲ್ಲಿ ಉಳುಮೆ ಮಾಡಿಕೊಂಡಿದ್ದಾರೆ. ಮಂಜೂರಾದ ನಂತರ ಭೂಮಿಯ ಹದ್ದುಬಸ್ತು ಮಾಡಿಸಬೇಕಾಗಿತ್ತು. ಸರ್ವೇ ನಂ.893 ಮತ್ತು 896ರಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲಾಗಿತ್ತು. ಮುಂದಿನ ದಿನಗಳಲ್ಲಿ ಪುನಃ ಸರ್ವೇ ನಡೆಸಿ ಸಾವಿತ್ರಮ್ಮಗೆ ಸೇರಿದ ಭೂಮಿ ಎಲ್ಲಿದೆ ಎಂದು ಗುರುತಿಸಿ ಅವರಿಗೆ ಹಸ್ತಾಂತರಿಸಲಾಗುವುದು. ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಶ್ವನಾಥ, ಮುಖಂಡ ಬುಡ್ಡನಗೌಡ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *