ದೇವದುರ್ಗ: ತಾಲೂಕಿನ ಗಬ್ಬೂರಿನ ಜನನಿಬಿಡ ಪ್ರದೇಶದಲ್ಲಿ ಬಸ್ ತಂಗುದಾಣ ಕೊರತೆಯಿಂದ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದು, ಮಹಿಳೆಯರು ಹಾಗೂ ಮಕ್ಕಳಿಗೆ ಅಸುರಕ್ಷತೆ ಕಾಡುತ್ತಿದೆ.
ಕಲ್ಮಲಾ ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಗೆ ಪಟ್ಟಣ ಹೊಂದಿಕೊಂಡಿದೆ. ಮುಖ್ಯರಸ್ತೆಯಿಂದ ಒಂದೂವರೆ ಕಿಮೀ ದೂರವಿರುವ ಹಳೇ ಊರಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಎಲ್ಲ ಬಸ್‌ಗಳು ನಿಲ್ದಾಣದ ಒಳಗೆ ಹೋಗಿಬರುತ್ತಿದ್ದರೂ ಮುಖ್ಯರಸ್ತೆಯಲ್ಲಿ ಹಲವು ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಾರೆ. ಮುಖ್ಯರಸ್ತೆ ಜನರಿಗೆ ಅನುಕೂಲವಾಗಿದ್ದು ಅಲ್ಲದೆ ಬಸ್‌ಗಳ ನಿಲುಗಡೆಗೆ ಅವಕಾಶವಿದೆ. ಜೆಸ್ಕಾಂ ಕಚೇರಿ ಹಾಗೂ ಪ್ರವಾಸಿ ಮಂದಿರ ಮುಂಭಾಗದಲ್ಲಿ ಹಲವು ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಾರೆ.
ಮುಖ್ಯರಸ್ತೆಯಲ್ಲಿ ಜನರ ಓಡಾಟ ಹೆಚ್ಚಿದ್ದು ಹೋಟೆಲ್, ಖಾನಾವಳಿ, ಹಣ್ಣು, ತರಕಾರಿ ಅಂಗಡಿ, ವ್ಯಾಪಾರಿ ಮಳಿಗೆಗಳು ಅಧಿಕ ಇವೆ. ಅಲ್ಲದೆ ಗ್ರಾಮೀಣ ಭಾಗದ ಬಸ್, ಖಾಸಗಿ ವಾಹನಗಳು ಮುಖ್ಯರಸ್ತೆಯಲ್ಲೇ ನಿಲ್ಲುತ್ತಿವೆ. ಹೀಗಾಗಿ ಬಹುತೇಕ ಪ್ರಯಾಣಿಕರು ಇಲ್ಲಿಯೇ ಇಳಿಯುವ, ಬಸ್‌ಗಾಗಿ ಕಾಯುತ್ತಾರೆ. ಇಲ್ಲಿ ತಂಗುದಾಣ ಇಲ್ಲದೆ ಪ್ರಯಾಣಿಕರು ರಸ್ತೆ, ಫುಟ್‌ಪಾತ್ ಮೇಲೆ ನಿಲ್ಲುವ ಸ್ಥಿತಿಯಿದೆ. ಮಹಿಳೆಯರು, ಮಕ್ಕಳು ಅಂಗಡಿ, ಮುಂಗಟ್ಟು ಮುಂದೆ ಕುಳಿತು ಬಸ್‌ಗಾಗಿ ಕಾಯಬೇಕು.
ರಸ್ತೆಯ ಎರಡೂ ಬದಿಗೆ 15-20 ಫೀಟ್‌ನಷ್ಟು ಜಾಗವಿದ್ದು ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಬಸ್ ಸೆಲ್ಟರ್ ನಿರ್ಮಿಸಬೇಕು ಎನ್ನುವ ಬೇಡಿಕೆಯಿದೆ. ಸೆಲ್ಟರ್ ಅಥವಾ ತಂಗುದಾಣ ನಿರ್ಮಿಸಿದರೆ ಮಕ್ಕಳು, ಮಹಿಳೆಯರಿಗೆ ಸುರಕ್ಷತೆ ಇರಲಿದೆ. ಜತೆಗೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆಯಾಗಲಿದೆ. ಈ ಬಗ್ಗೆ ಗ್ರಾಮಸ್ಥರು ಹಲವು ಸಲ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ, ಶಾಸಕರ ವಿಶೇಷ ಅನುದಾನದಡಿ ಈ ಹಿಂದೆ ಕಂಡುಕಂಡಲ್ಲಿ ಬಸ್ ಸೆಲ್ಟರ್ ನಿರ್ಮಿಸಲಾಗಿದೆ. ಅಗತ್ಯ ಇರುವ ಕಡೆ ಸೆಲ್ಟರ್ ನಿರ್ಮಿಸಿಲ್ಲ. ಪ್ರವಾಸಿ ಮಂದಿರ, ಜೆಸ್ಕಾಂ ಕಚೇರಿ ಮುಂಭಾಗದಲ್ಲಿ ಸರ್ಕಾರಿ ಜಾಗವಿದ್ದು ಅಲ್ಲಿ ತಂಗುದಾಣ ಇಲ್ಲವೆ ಬಸ್ ಸೆಲ್ಟರ್ ನಿರ್ಮಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುವ ಜತೆಗೆ ಭದ್ರತೆ ಕೂಡ ಸಿಗಲಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.