ಜಿಂಕೆ ಬೇಟೆಗಾರರ ಬಂಧನ

ತರೀಕೆರೆ; ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.

ಯರೇಹಳ್ಳಿ ತಾಂಡದ ರವಿನಾಯ್ಕ (40) ಹಾಗೂ ನಾಗೇನಹಳ್ಳಿ ಗ್ರಾಮದ ನಿವಾಸಿ ಲಿಂಗಾನಾಯ್ಕ (50) ಬಂಧಿತ ಆರೋಪಿಗಳು. ಭೈರನಾಯ್ಕನಹಳ್ಳಿಯ ಕುಮಾರ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳು ಶನಿವಾರ ಬೆಳಗ್ಗೆ ನಾಗೇನಹಳ್ಳಿ ಗ್ರಾಮ ಸಮೀಪದ ಹುಲಿಕಟ್ಟೆ ಬಳಿ ನೀರು ಕುಡಿಯಲು ಬಂದಿದ್ದ ಜಿಂಕೆಯನ್ನು ಮದ್ದು, ಗುಂಡು ಸಿಡಿಸಿ ಸಾಯಿಸಿ ನಾಗೇನಹಳ್ಳಿ ತಾಂಡಕ್ಕೆ ತಂದು ಮಾಂಸ ಮಾಡಿ ಮಾರಾಟ ಮಾಡಿದ್ದರು. ಪಾಲು ಮಾಡಿ ಹಂಚಿಕೊಂಡಿದ್ದ ಮಾಂಸವನ್ನು ಸಾಂಬಾರು ಮಾಡಿ ಸವಿಯಲು ಸಜ್ಜಾಗಿದ್ದರು ಎಂದು ತಿಳಿದುಬಂದಿದೆ.

ಇದರ ಮಾಹಿತಿ ತಿಳಿದ ವಲಯ ಅರಣ್ಯ ಅಧಿಕಾರಿ ಎಂ.ವಿ.ಚರಣ್​ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ತಂಡ, ನಾಗೇನಹಳ್ಳಿಯ ಲಿಂಗಾನಾಯ್ಕನ ಮನೆಯಿಂದ ಜಿಂಕೆ ಮಾಂಸದ ಸಾರನ್ನು ವಶಕ್ಕೆ ಪಡೆಯಿತು. ಹಾದಿಕೆರೆ ಗ್ರಾಮದ ಕೆರೆ ಏರಿ ಮೇಲೆ ಬೈಕ್​ನಲ್ಲಿ ಹೋಗುತ್ತಿದ್ದ ಮತ್ತೊಬ್ಬ ಆರೋಪಿ ರವಿನಾಯ್ಕನನ್ನು ತಡೆದು ಪರಿಶೀಲನೆ ನಡೆಸಿದಾಗ ಬೈಕ್​ನಲ್ಲಿ ಮದ್ದು ಗುಂಡುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆತನನ್ನೂ ವಶಕ್ಕೆ ಪಡೆಯಲಾಯಿತು.

ಬಂಧಿತ ಆರೋಪಿ ರವಿನಾಯ್ಕ ಯರೇಹಳ್ಳಿ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೂಡ ಹೌದು.