ಬಿಸಿಯೂಟದಲ್ಲಿ 30 ಗ್ರಾಂ ಅನ್ನ ಕಡಿತ ಪತ್ತೆ

ಹಾಸನ: ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ 150 ಗ್ರಾಂ ಅನ್ನ ನೀಡಬೇಕಿದ್ದರೂ ಜಿಲ್ಲಾದ್ಯಂತ 120 ಗ್ರಾಂ ಮಾತ್ರ ಪೂರೈಕೆಯಾಗುತ್ತಿದೆ. ಉಳಿದ 30 ಗ್ರಾಂ ಎಲ್ಲಿಗೆ ತಲುಪುತ್ತಿದೆ ಎಂಬ ಮಾಹಿತಿ ಕಲೆಹಾಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣಮೂರ್ತಿ ಹೇಳಿದರು.

ರಾಜ್ಯದ ಎಲ್ಲ ಅಂಗನವಾಡಿ, ಶಾಲೆಗಳ ಬಿಸಿಯೂಟ ಕೇಂದ್ರ, ಗೋದಾಮು ಘಟಕ, ವಸತಿ ನಿಲಯಗಳಿಗೆ ಭೇಟಿ ನೀಡಲಾಗಿದೆ. 20 ಜಿಲ್ಲೆಗಳ ಪ್ರವಾಸ ಮುಗಿದಿದ್ದು ಹಾಸನದಲ್ಲೂ ಮೂರು ದಿನ ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಜಿಲ್ಲೆಯ 10 ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಬರಗೂರು ನ್ಯಾಯಬೆಲೆ ಅಂಗಡಿ ವ್ಯವಸ್ಥಾಪಕರ ವಿರುದ್ಧ ದೂರು ಕೇಳಿಬಂದಿವೆ. ವಾರದಲ್ಲಿ ಮೂರು ದಿನ ಮಾತ್ರ ಬಾಗಿಲು ತೆರೆಯುವುದು, ಕಡಿಮೆ ಸಾಮಗ್ರಿ ವಿತರಣೆ ಹಾಗೂ ಪಡಿತರದಾರರಿಂದ 10 ರೂ. ಲಂಚ ಪಡೆಯುತ್ತಾರೆಂಬ ದೂರು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಅಂಗಡಿ ಅನುಮತಿ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಆಲೂರು ಹಾಗೂ ಅರಕಲಗೂಡು ತಾಲೂಕಿನ ಕೆಲ ವಸತಿ ನಿಲಯಗಳಲ್ಲಿ ಆಹಾರ ಪದಾರ್ಥ ವಿತರಣೆಯಲ್ಲಿ ಲೋಪದೋಷ ಕಂಡುಬಂದಿದೆ. ಉಳಿದಂತೆ ಅಂಗನವಾಡಿಗಳ ಅವ್ಯವಸ್ಥೆ ಹೆಚ್ಚಿದ್ದು ಪರಿಹಾರ ಕ್ರಮಕ್ಕೆ ಸೂಚಿಸಲಾಗಿದೆ. ಗುಣಮಟ್ಟದ ಆಹಾರ ಕೊರತೆಯಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಹೆಚ್ಚಾಗಿದೆ ಎಂದರು.
ಆಹಾರ ಆಯೋಗದ ಸದಸ್ಯ ಹಸಬಿ ಮಾತನಾಡಿ, ಹಿಂದಿನ ಸರ್ಕಾರ ಪಡಿತರ ವಿತರಣೆ ವೇಳೆ ತೊಗರಿಬೇಳೆಯನ್ನು ನೀಡುತ್ತಿತ್ತು. ಆದರೆ ಈಗ ಬೇಳೆ ವಿತರಣೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ 30 ಕ್ವಿಂಟಾಲ್ ಬೇಳೆ ಗೋದಾಮಿನಲ್ಲಿ ದಾಸ್ತಾನಿದ್ದು, ಅದನ್ನು ವಿಲೇವಾರಿ ಮಾಡಲು ಸೂಚಿಸಲಾಗಿದೆ ಎಂದರು.

ಸರ್ಕಾರಕ್ಕೆ ಪ್ರಸ್ತಾವನೆ: ಪಡಿತರ ಅಕ್ಕಿಯೊಂದಿಗೆ ರಾಗಿ, ಜೋಳ ಹಾಗೂ ಗೋಧಿ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಕೆಜಿಗೆ ಅಕ್ಕಿಗೆ 3 ರೂ.ಹಾಗೂ ವಿವಿಧ ಧಾನ್ಯಕ್ಕೆ 2 ರೂ.ದರ ನಿಗದಿಪಡಿಸಲಾಗಿದೆ. ಕರಾವಳಿ ಭಾಗದ ಜಿಲ್ಲೆಗಳಿಗೆ ಗೋಧಿ, ದಕ್ಷಿಣ ಕರ್ನಾಟಕದಲ್ಲಿ ರಾಗಿ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜೋಳ ವಿತರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಆದರೆ ಕಡಿಮೆ ಬೆಲೆಗೆ ಜೋಳ ಸಿಗುತ್ತಿಲ್ಲವಾದ್ದರಿಂದ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ನಷ್ಟದಲ್ಲಿ ಎಂಎಸ್‌ಪಿಟಿಸಿ: ಆಯೋಗದ ಸದಸ್ಯ ಶಿವಶಂಕರ್ ಮಾತನಾಡಿ, ತಮ್ಮದಲ್ಲದ ತಪ್ಪಿಗೆ ಜಿಲ್ಲೆಯ 4 ಎಂಎಸ್‌ಪಿಟಿಸಿಗಳು (ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕ) ನಷ್ಟ ಅನುಭವಿಸುತ್ತಿವೆ. ರಾಜ್ಯದ ಯಾವ ಜಿಲ್ಲೆಯಲ್ಲೂ ಎಂಎಸ್‌ಪಿಟಿಸಿಗಳು ಇಷ್ಟೊಂದು ಅಧೋಗತಿ ತಲುಪಿಲ್ಲ. ನೌಕರರ ಸಮನ್ವಯ ಕೊರತೆ ಹಾಗೂ ಇತರ ಕಾರಣಗಳಿಂದ ಕಚ್ಚಾ ಪದಾರ್ಥ ಪೂರೈಕೆ ಮಾಡುವ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಸೂಕ್ತ ಪರಿಶೀಲನೆ ನಡೆಸಿ ಯಾರಿಗೂ ತೊಂದರೆ ಆಗದಂತೆ ಎಚ್ಚರ ವಹಿಸಬೇಕಿದೆ. ಇಲಾಖೆಯಿಂದ ಸಕಾಲಕ್ಕೆ ಅನುದಾನ ಬಿಡುಗಡೆಯಾಗಿದೆ. ಆದರೆ ಎಂಎಸ್‌ಪಿಟಿಸಿಗಳು ನಷ್ಟ ಹೊಂದಿರುವುದು ಆಶ್ಚರ್ಯ ಹುಟ್ಟಿಸಿದೆ ಎಂದು ಪ್ರತಿಕ್ರಿಯಿಸಿದರು.

ಆಹಾರ ಆಯೋಗ ಸದಸ್ಯರಾದ ಬಿ.ಪಾಟೀಲ್, ಮಹ್ಮದ್ ಆರಿ, ಮಂಜುಳಾಬಾಯಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಜಿಪಂ ಸಿಇಒ ಬಿ.ಎ.ಪರಮೇಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಪಿ.ಸವಿತಾ ಸುದ್ದಿಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *