ಆರೋಗ್ಯ ಸಮಸ್ಯೆ ಆರಂಭದಲ್ಲಿಯೇ ಪತ್ತೆ ಹಚ್ಚಿ: ಆಯಿಷ್ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಸಲಹೆ

blank

ಮೈಸೂರು: ಯಾವುದೇ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಗುಣಪಡಿಸಲು ಸುಲಭ. ಹಾಗಾಗಿ ಹುಟ್ಟಿದಾಗಿನಿಂದ ಮಕ್ಕಳನ್ನು ಆಗಾಗ್ಗೆ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಬೇಕು ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಶ್ರವಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಗು ಹುಟ್ಟಿದ ಕೆಲ ದಿನಗಳಲ್ಲಿಯೇ ಅದು ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆಯೇ ಎಂಬುದನ್ನು ಕೆಲವೊಂದು ಪರೀಕ್ಷೆಗೆ ಒಳಪಡಿಸುವ ಮೂಲಕ ಖಚಿತಪಡಿಸಿಕೊಳ್ಳಬೇಕು. ಹೀಗೆ ಆರಂಭದಲ್ಲಿಯೇ ವಾಕ್ ಮತ್ತು ಶ್ರವಣ ದೋಷ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಅದು ಫಲಕಾರಿಯಾಗುತ್ತದೆ ಎಂದರು.
ಎಲ್ಲರ ಮಾತನ್ನು ಕೇಳಿಸಿಕೊಳ್ಳುವ ಮಗು ಮಾತನಾಡುವ ಸಾಮರ್ಥ್ಯ ಹೊಂದಿರುತ್ತದೆ. ಈ ಅಂಶವನ್ನು ಮಗುವಿನಲ್ಲಿ ಗುರುತಿಸಿ ಚಿಕಿತ್ಸೆ ಕೊಡಿಸಬೇಕು. ಇದಕ್ಕೆ ಬದಲಾಗಿ ಮಗುವಿನ ದೋಷವನ್ನು ಕಂಡು ನಮ್ಮ ಹಿರಿಯರಿಗೂ ಹೀಗೆ ಆಗಿದ್ದು, ಕೆಲ ವರ್ಷಗಳ ಬಳಿಕ ಸರಿಯಾಯಿತು ಎನ್ನುವ ತಾತ್ಸಾರ, ಮೂಢನಂಬಿಕೆ ಬೇಡ. ಚಿಕಿತ್ಸೆ ವಿಳಂಬ ಮಾಡಿದರೆ ಇರುವ ದೋಷವನ್ನು ಸರಿಪಡಿಸಲು ಸಾಧ್ಯವಾಗದ ಸನ್ನಿವೇಶ ಸೃಷ್ಟಿಯಾಗುತ್ತದೆ. ಆದ್ದರಿಂದ ಆರಂಭದಲ್ಲಿಯೇ ಚಿಕಿತ್ಸೆ ನೀಡುವುದು ಉತ್ತಮ ಎಂದರು.
ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಗೋಪಿನಾಥ್ ಮಾತನಾಡಿ, ಶ್ರವಣ ದೋಷವುಳ್ಳ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮಕ್ಕಳಲ್ಲಿ ಶ್ರವಣ ದೋಷವನ್ನು ಪತ್ತೆ ಮಾಡಲು ದಾದಿಯರಿಗೆ ವಿಶೇಷ ತರಬೇತಿ ನೀಡಲಾಗಿದೆ. ಇದುವರೆಗೂ 88 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಶ್ರವಣ ದೋಷಕ್ಕೆ ಪರಿಹಾರ ಒದಗಿಸಲಾಗಿದೆ ಎಂದು ತಿಳಿಸಿದರು.
ಆಯುಷ್‌ನ ಶ್ರವಣ ದೋಷ ತಡೆಗಟ್ಟುವಿಕೆ ವಿಭಾಗದ ಮುಖ್ಯಸ್ಥ ಡಾ.ಸಂದೀಪ್ ಮಾತನಾಡಿ, ವಿಶ್ವದಲ್ಲಿ 6.3 ಮಿಲಿಯನ್ ಮಕ್ಕಳು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಹುಟ್ಟುವ ಪ್ರತಿ ಒಂದು ಸಾವಿರ ಮಕ್ಕಳಲ್ಲಿ ಇಬ್ಬರಿಗೆ ಶ್ರವಣ ದೋಷ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ ಎಂದರು.
ಭಾರತದಲ್ಲಿ ಪ್ರತಿದಿನ ಜನನವಾಗುವ 70 ಸಾವಿರ ಮಕ್ಕಳಲ್ಲಿ 140 ಶಿಶುಗಳಿಗೆ ಶ್ರವಣ ದೋಷ ಕಂಡುಬರುತ್ತದೆ. ಅಂಕಿಅಂಶದ ಪ್ರಕಾರ ಒಂದು ವರ್ಷದಲ್ಲಿ 50 ಸಾವಿರ ಮಕ್ಕಳು ಶ್ರವಣ ದೋಷದೊಂದಿಗೆ ಜನಿಸುತ್ತಿವೆ. ಇದರ ಜತೆಗೆ 60 ವರ್ಷ ದಾಟಿದವರಲ್ಲಿ ಶೇ.30ರಷ್ಟು ಜನರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಡಾ.ಸಿರಾಜ್ ಅಹಮದ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಡಿ.ಜಿ.ನಾಗರಾಜ್ ಇತರರು ಇದ್ದರು.

Share This Article

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…

ಮಾವಿನಹಣ್ಣು ತಿಂದು ಈಸಿಯಾಗಿ ದೇಹದ ತೂಕ ಇಳಿಸಬಹುದು! ಹೊಸ ಅಧ್ಯಯನ.. mango

mango: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಮಾವಿನಹಣ್ಣನ್ನು ತಪ್ಪಿಸುತ್ತಾರೆ. ಆದರೆ ಇತ್ತೀಚಿನ ಅಧ್ಯಯನವು ತೂಕ…