ಭತ್ತದ ಗದ್ದೆ ನಾಶ, ಅರಣ್ಯಾಧಿಕಾರಿ ಭೇಟಿ

ಮುಂಡಗೋಡ: ತಾಲೂಕಿನಲ್ಲಿ ಕಾಡಾನೆಗಳ ದಾಳಿಯಿಂದ ನಾಶವಾದ ತೋಟಗಳಿಗೆ ಮತ್ತು ಭತ್ತದ ಗದ್ದೆಗಳಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ. ಭಟ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ 2 ತಿಂಗಳಿನಿಂದ ತಾಲೂಕಿನ ಚವಡಳ್ಳಿ, ಗುಂಜಾವತಿ, ಮೈನಳ್ಳಿ ಮತ್ತು ನಾಗನೂರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಕೆಲವು ಗ್ರಾಮಗಳ ಗದ್ದೆಗಳಲ್ಲಿ ಸುಮಾರು 20-25 ಕಾಡಾನೆಗಳ ಹಿಂಡು ಅಲ್ಲಲ್ಲಿ ಠಿಕಾಣಿ ಹೂಡಿ ಅಲ್ಲಿನ ರೈತರ ಗದ್ದೆಗಳ ಮತ್ತು ತೋಟಗಳ ಬೆಳೆಯನ್ನು ನಾಶ ಮಾಡುತ್ತಾ ಬರುತ್ತಿವೆ. ಸರ್ಕಾರ ಆನೆ ದಾಳಿಯನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡು, ಹಾನಿಯಾದ ಬಗ್ಗೆ ಹೆಚ್ಚಿನ ಪರಿಹಾರ ನೀಡುವಲ್ಲಿ ಪ್ರಯತ್ನವಾಗಬೇಕೆಂದು ಒತ್ತಾಯಿಸಿದ್ದಾರೆ.

ರೈತರು ತಮ್ಮ ಕೃಷಿ ಜಮೀನಿನ ಸುತ್ತ ಟ್ರಿಪ್ ಅಲಾರಾಂ ಅಳವಡಿಸಿಕೊಳ್ಳಬೇಕು. ಮತ್ತು ಕಾಡಾನೆಗಳ ಬರುವಿಕೆ ತಪ್ಪಿಸಲು ಮೆಣಸಿನ ಪುಡಿ ಮತ್ತು ಹಳೆಯ ಬಟ್ಟೆಗಳಿಂದ ಸುಟ್ಟ ಘಾಟಿನ ವಾಸನೆಯನ್ನು ಆನೆಗಳು ಬರುವ ದಿಕ್ಕುಗಳಲ್ಲಿ ಅಲ್ಲಲ್ಲಿ ಹಾಕಬೇಕು. ಅರಣ್ಯ ಇಲಾಖೆಯ ಸೋಲಾರ್ ತಂತಿಯ ಬೇಲಿಯ ಯೋಜನೆಯ ಉಪಯೋಗ ರೈತರು ಪಡೆಯಬೇಕು ಮತ್ತು ಹಾನಿಗೊಳಗಾದ ರೈತರಿಗೆ ಸರಕಾರದಿಂದ ಬರುವ ಪರಿಹಾರವನ್ನು ಆದಷ್ಟು ಬೇಗ ನೀಡಲಾಗುವುದು.
 ಆರ್.ಜಿ.ಭಟ್ ಉಪ ಅರಣ್ಯ ಸಂರಕ್ಷಣಾಧಿಕಾರಿ