ಪೂರ್ವ ನಿಯೋಜಿತ ಕಾರ್ಯಕ್ರಮದಿಂದಾಗಿ ಸಭೆಗೆ ಗೈರು

ಬೆಳಗಾವಿ: ಪೂರ್ವನಿಯೋಜಿತ ಕಾರ್ಯಕ್ರಮದ ನಿಮಿತ್ತ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಪಕ್ಷ ಸಂಘಟನೆ ಕುರಿತ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದ ಸಭೆಗೆ ತೆರಳಲು ಸಾಧ್ಯವಾಗಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಭೆ ಕರೆಯಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಭೆಗೆ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿ ಎಂಬ ಉದ್ದೇಶದಿಂದ ಎರಡೂ ಪಕ್ಷದ ನಾಯಕರು ಸಮನ್ವಯ ಸಮಿತಿ ರಚಿಸಿಕೊಂಡಿದ್ದಾರೆ. ಈ ಸಭೆಯಲ್ಲಿ ಸರ್ಕಾರದಲ್ಲಿನ ತಪ್ಪು, ಒಪ್ಪುಗಳ ಕುರಿತು ಮತ್ತು ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆಗಿದೆ. ಆದರೆ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದ್ದು, 5 ವರ್ಷ ಅಧಿಕಾರ ನಡೆಸಲಿದೆ. ಈ ಸರ್ಕಾರ ಪಥನ ಆಗುತ್ತದೆ ಎನ್ನುವುದು ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಸಹೋದರ ಬೈಯುವುದು ಹೊಸದಲ್ಲ

ಸಹೋದರ ರಮೇಶ ಜಾರಕಿಹೊಳಿ ಬೈಯುವುದು ಹೊಸದೇನಲ್ಲ. ಅವರು ನನ್ನನ್ನು ಸೇರಿ ಎಲ್ಲರನ್ನು ಬೈಯುತ್ತಾರೆ. ಯಾರನ್ನೂ ಬಿಟ್ಟಿಲ್ಲ. ಇದೀಗ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಿಕ್ಕಿದ್ದಾರೆ. ಅವರನ್ನು ಬೈದಿದ್ದಾರೆ ಅಷ್ಟೇ. ಇದರಲ್ಲಿ ಹೊಸದೇನೂ ಇಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದರು.
ರಮೇಶ ಜಾರಕಿಹೊಳಿ ತಮ್ಮ ಭಾಷೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವುದು ಅವಶ್ಯಕ. ಕೆಲವು ಪದಗಳನ್ನು ಬಳಕೆ ಮಾಡಬಾರದಾಗಿತ್ತು. ಆದರೆ, ಕೋಪದಲ್ಲಿ ಬಾಯಿ ತಪ್ಪಿ ಮಾತನಾಡಿದ್ದಾರೆ. ಹಾಗಂತ ಅದನ್ನು ದೊಡ್ಡದಾಗಿ ಬಿಂಬಿಸುವುದು ಸರಿಯಲ್ಲ.ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ರಮೇಶ ಸಾಕಷ್ಟು ಸಾರಿ ಬೈದಿದ್ದಾರೆ. ಆದರೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಂತೆ ದೊಡ್ದದು ಮಾಡಿಲ್ಲ. ಈ ವರೆಗೆ ಯಾವ ವಿಷಯವನ್ನೂ ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ ಎನ್ನುತ್ತಾ ಸಹೋದರ ರಮೇಶ ಜಾರಕಿಹೊಳಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳಲು ಶಾಸಕ ಸತೀಶ ಜಾರಕಿಹೊಳಿ ಪ್ರಯತ್ನಿಸಿದರು.