ಕೊಟ್ಟಾಂವ ಕೋಡಂಗಿ ಈಸ್ಕೊಂಡಾಂವ ಈರಭದ್ರ !

ಪರಶುರಾಮ ಭಾಸಗಿ ವಿಜಯಪುರ
ಕೊಟ್ಟಾಂವ ಕೋಡಂಗಿ ಈಸ್ಕೊಂಡಾಂವ ಈರಭದ್ರ ಅನ್ನೋ ಮಾತು ಅಕ್ಷರಶಃ ಇಲ್ಲಿ ನಿಜವಾಗಿದೆ.
ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಐಎಂಐ ಪ್ರಕರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಅಂಥದ್ದೇ ಪ್ರಕರಣಗಳು ಬಯಲಿಗೆ ಬರುತ್ತಿದ್ದು, ಆ ಪೈಕಿ ‘ದೇಸಿ ಸ್ಕಿಲ್ಸ್’ ಹೆಸರಿನ ಸಂಸ್ಥೆಯೊಂದರ ಹೂರಣವೂ ಹೊರಬಿದ್ದಿದೆ. ವಿಜಯಪುರ ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಈ ಸಂಸ್ಥೆ ಪಂಗನಾಮ ಹಾಕಿದ್ದಾಗಿ ಇದೀಗ ಮೋಸ ಹೋದವರು ಮಮ್ಮಲ ಮರುಗುತ್ತಿದ್ದಾರೆ.
ಗ್ರಾಮೋದ್ಧಾರ ಕೇಂದ್ರದ ಹೆಸರಿನಲ್ಲಿ ಜನರಿಗೆ ವಂಚನಗೈಯಲಾಗಿದ್ದು, ಫಲಾನುಭವಿಗಳು ಗೃಹ ಇಲಾಖೆ ಬಾಗಿಲು ತಟ್ಟಿದ್ದಾರೆ. ಹೇಗಾದರೂ ಸರಿ ನಮ್ಮ ಹಣ ನಮಗೆ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಆದರೆ, ಫಲಾನುಭವಿಗಳ ಆರ್ತನಾದ ಕೇಳಿಸಿಕೊಳ್ಳಲು ಯಾರೂ ಇಲ್ಲದಂತಾಗಿದೆ.
ಏನಿದು ಪ್ರಕರಣ?
ಬೆಂಗಳೂರು ಮೂಲದ ‘ದೇಸಿ ಸ್ಕಿಲ್ಸ್ ’ ಎಂಬ ಸಂಸ್ಥೆಯೊಂದು ಪ್ರಾಂಚೈಸಿ ನೀಡುವ ಭರವಸೆ ನೀಡಿ ಜನರಿಂದ ಹಣ ಎತ್ತಿದೆ. ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸಂಜೀವಿನಿ, ಇ-ಶಿಕ್ಷಣ, ಇ-ಕಾಮರ್ಸ್, ಇ-ಬ್ಯಾಂಕಿಂಗ್, ಇ-ಆಡಳಿತ, ಕೌಶಲಾಭಿವೃದ್ಧಿ, ನಾಗರಿಕ ಸೇವಾ ಪಾವತಿಗಳು, ಸೋಲಾರ್ ಉತ್ಪನ್ನಗಳು ಮತ್ತು ಅವುಗಳ ಪ್ರಚಾರ, ವಿಮೆ ಸೇರಿ ಹತ್ತು ಹಲವು ಸೇವೆಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಗ್ರಾಮೋದ್ಧಾರ ಕೇಂದ್ರ ತೆರೆಯಲು ಅವಕಾಶ ನೀಡುವುದಾಗಿ ಸಾರ್ವಜನಿಕರಿಂದ ಹಣ ಪಡೆದಿದೆ. ಗ್ರಾಮೋದ್ಧಾರ ಕೇಂದ್ರ ತೆರೆದರೆ ನಮಗೂ ಉದ್ಯೋಗ ಸಿಕ್ಕಂತಾಗುತ್ತದೆ. ನಮ್ಮ ಜನರಿಗೂ ಸ್ಥಳೀಯವಾಗಿ ಸೇವೆಗಳು ಸಿಗುತ್ತವೆ ಎಂಬ ಆಶಯದಿಂದ 800ಕ್ಕೂ ಅಧಿಕ ನಿರುದ್ಯೋಗಿ ಯುವಕ ಯುವತಿಯರು ತಲಾ 20 ಸಾವಿರ ರೂ.ಗಳಂತೆ ಹಣ ನೀಡಿದ್ದಾರೆ.
ಹಣವೂ ಇಲ್ಲ; ಕೇಂದ್ರವೂ ಇಲ್ಲ: ಸದರಿ ಸೇವಾ ಸೌಲಭ್ಯ ಕಲ್ಪಿಸಲು ಡೆಸ್ಕ್ ಟಾಪ್, ಇಂಟರ್‌ನೆಟ್ ಸೌಲಭ್ಯ ಸೇರಿ ಪೂರಕ ಸಾಮಗ್ರಿ ಕೊಳ್ಳುವಂತೆ ಹೇಳಿದ್ದರಿಂದ ಎಲ್ಲವನ್ನೂ ಪಡೆದಿದ್ದಾರೆ. ಬಳಿಕ 10*10 ಚದರ ಅಡಿ ಮಳಿಗೆ ಬೇಕೆಂದಾಗ ಅದನ್ನೂ ಮಾಡಿದ್ದಾರೆ. ದೇಸಿ ಸ್ಕಿಲ್ಸ್ ಕಂಪನಿಯ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಕೌಶಿಕ್ ಎಂಬುವವರು ಹಣ ಹಾಕಿ ಎಂದು ಪೀಡಿಸಿ ಜನರಿಂದ ಹಣ ಹಾಕಿಸಿಕೊಂಡಿದ್ದರಂತೆ. ಕುಮಾರ ಕೆ.ಎನ್., ಕಾವ್ಯ ವೇಣು ಎಂಬುವವರು ಸಹ ಹಣ ಹಾಕಿದರೆ ಬೇಗ ಪ್ರಾಂಚೈಸಿ ಸಿಗುತ್ತದೆ ಎಂದು ಬಣ್ಣದ ಮಾತು ಹೇಳಿ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ವಿಜಯಾ ಬ್ಯಾಂಕ್ ಶಾಖೆಯಲ್ಲಿರುವ ಅಕೌಂಟ್ ನಂಬರ್ 156601011001933 ಕ್ಕೆ ಹಾಕಿಸಿಕೊಂಡಿದ್ದಾರೆ. ಆದರೆ, ಈವರೆಗೂ ಸೇವೆ ನೀಡದೆ ಮೋಸ ಮಾಡಿದ್ದಾರೆಂದು ನೊಂದ ಫಲಾನುಭವಿಗಳು ಆರೋಪಿಸಿದ್ದಾರೆ.
ಒಟ್ಟಾರೆ ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವವರು ಇದ್ದೇ ಇರುತ್ತಾರೆಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದ್ದು, ಪ್ರಕರಣದ ಸಮಗ್ರ ತನಿಖೆ ನಡೆದು ನೊಂದವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವಾಗಬೇಕಿದೆ.

Leave a Reply

Your email address will not be published. Required fields are marked *