ನಾಗಮಂಗಲ: ರಸ್ತೆ ಮೇಲೆ ಸಂಚರಿಸಲು ಯೋಗ್ಯವಲ್ಲ ಎಂದು ಆರ್‌ಟಿಒ ವಾಹನಗಳ ನೋಂದಣಿ ರದ್ದು ಮಾಡಿದ್ದರೂ ಅವುಗಳನ್ನೇ ಬಳಸುವಂತಹ ದುಸ್ಥಿತಿ ಇಲ್ಲಿನ ಅಗ್ನಿಶಾಮಕ ದಳದ್ದು.

ಹೌದು. ಸಾರಿಗೆ ಇಲಾಖೆ ನಿಯಮದ ಪ್ರಕಾರ 15 ವರ್ಷ ಹಳೆಯದಾದ ಸರ್ಕಾರಿ ನೋಂದಣಿ ವಾಹನಗಳು ಚಾಲನೆ ಮಾಡಲು ಅರ್ಹವಾಗಿಲ್ಲವೆಂದು ಸಾರಿಗೆ ಇಲಾಖೆಯಲ್ಲಿ ಅಂತಹ ವಾಹನಗಳ ನೋಂದಣಿ ತಾನಾಗಿಯೇ ರದ್ದುಗೊಳ್ಳುತ್ತದೆ. ಅಂತೆಯೇ ಇಲ್ಲಿನ ಅಗ್ನಿಶಾಮಕ ಠಾಣೆಯಲ್ಲಿರುವ 2 ತುರ್ತು ವಾಹನಗಳ ನೋಂದಣಿ ಕೂಡ ರದ್ದಾಗಿದೆ. ಆದರೆ ಜನರ ಹಿತದೃಷ್ಟಿಯಿಂದ ಅಧಿಕಾರಿಗಳು ನೋಂದಣಿ ರದ್ದಾಗಿರುವ ವಾಹನಗಳನ್ನೇ ಬಳಸುವ ಅನಿವಾರ್ಯತೆ ಇದೆ.
ಬೇಸಿಗೆ ಸಮೀಪಿಸುತ್ತಿದ್ದಂತೆ ಅಗ್ನಿ ಅವಘಡಗಳು ಹೆಚ್ಚಾಗಿ ಅಗ್ನಿಶಾಮಕ ತುರ್ತು ವಾಹನಕ್ಕೆ ಕರೆಮಾಡುವುದು ಸಾಮಾನ್ಯ. ಆದರೆ ಅಂತಹ ತುರ್ತು ವಾಹನಗಳು ಸುಸ್ಥಿತಿಯಲ್ಲಿದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದೆ. ಜನಸಾಮಾನ್ಯರಿಗೆ ಕಾನೂನು ಪಾಠ ಹೇಳುವ ಸರ್ಕಾರವೇ ಕಾನೂನು ಪಾಲನೆ ಮಾಡದಿರುವುದು ವಿಪರ್ಯಾಸ.
ಜಿಲ್ಲೆಯಲ್ಲೇ ಹೆಚ್ಚು ವಿಸ್ತೀರ್ಣವಿರುವ ತಾಲೂಕು ನಾಗಮಂಗಲ. ಇಲ್ಲಿರುವ 2 ಅಗ್ನಿಶಾಮಕ ತುರ್ತುವಾಹನಗಳು ಬೇಸಿಗೆ ಸಮಯದಲ್ಲಿ ತುರ್ತು ಸೇವೆ ಸಲ್ಲಿಸಲು ಆಗುತ್ತಿಲ್ಲ. ತಾಲೂಕು ಕೇಂದ್ರಸ್ಥಾನದಿಂದ ಸುಮಾರು 40 ಕಿ.ಮೀ. ದೂರದವರೆಗೆ ಗಡಿ ಗ್ರಾಮಗಳಿದ್ದು ಅಷ್ಟು ದೂರ ತೆರಳಿ ಅಗ್ನಿಅವಘಡಗಳನ್ನು ನಂದಿಸುವುದು ಕಷ್ಟದ ಕೆಲಸ. ತುರ್ತು ವಾಹನ ತೆರಳುವಷ್ಟರಲ್ಲಿ ಸಂಪೂರ್ಣ ನಷ್ಟ ಉಂಟಾಗಿರುತ್ತದೆ. ಬೇಸಿಗೆ ಶುರುವಾಯಿತೆಂದರೆ ತಾಲೂಕು ವ್ಯಾಪ್ತಿಯಲ್ಲಿ ನಿತ್ಯ ಒಂದಲ್ಲೊಂದು ಅಗ್ನಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಂತ ಜವಾಬ್ದಾರಿಯಿಂದ ಜನರಿಗೆ ತುರ್ತು ಸೇವೆ ನೀಡುವ ಅನಿವಾರ್ಯತೆ ನಿರ್ಮಾಣವಾಗಿದೆ.
ಮಾನವೀಯ ದೃಷ್ಟಿಯಿಂದ ಬಳಕೆ; ತಾಲೂಕಿಗೆ 2007ರಲ್ಲಿ ಅಗ್ನಿಶಾಮಕ ಠಾಣೆ ಮಂಜೂರು ಆಗಿದ್ದು, 2009ರಲ್ಲಿ ನೂತನ ಅಗ್ನಿಶಾಮಕ ಠಾಣೆ ಉದ್ಘಾಟನೆಗೊಂಡಿತು. ಆ ಸಂದರ್ಭದಲ್ಲಿ ನೀಡಿದ್ದ ತುರ್ತು ವಾಹನಕ್ಕೆ 15 ವರ್ಷವಾಗಿರುವುದರಿಂದ ಜುಲೈ 2023ರಲ್ಲಿ ನೋಂದಣಿ ರದ್ದಾಗಿದೆ. ನಂತರದಲ್ಲಿ ಮೈಸೂರಿನ ಹೆಬ್ಬಾಳದ ಅಗ್ನಿಶಾಮಕ ಠಾಣೆಯಿಂದ ಹೊರಕರ್ತವ್ಯದ ಮೇರೆಗೆ 2008ರ ಮಾದರಿಯ ತುರ್ತುವಾಹನವನ್ನು ಪಟ್ಟಣದ ಅಗ್ನಿಶಾಮಕ ಠಾಣೆಗೆ ನೀಡಲಾಯಿತು. 2010 ಮಾ.3ರ ನೋಂದಣಿಯ ಈ ವಾಹನದ ವಾಯಿದೆ 2025ರ ಮಾ.2ಕ್ಕೆ ಮುಗಿದಿರುವುದರಿಂದ ಈ ವಾಹನವನ್ನೂ ರಸ್ತೆಗಿಳಿಸುವಂತಿಲ್ಲ. ಆದರೂ ಈ ವಾಹನವನ್ನೇ ಬಳಸಿಕೊಳ್ಳುವ ಅನಿವಾರ್ಯತೆ ಇಲ್ಲಿನ ಅಧಿಕಾರಿಗಳಿಗೆ ಬಂದೊದಗಿದೆ.
ರೈತರಿಗೆ ಅಪಾರ ನಷ್ಟ: ರೈತರು ಜಮೀನು ಮತ್ತು ತೋಟಗಳಲ್ಲಿ ಅನುಪಯುಕ್ತ ವಸ್ತುಗಳನ್ನು ಸುಡುವಾಗ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಬೆಂಕಿಗೆ ರಾಗಿ, ಭತ್ತದ ಹುಲ್ಲಿನ ಮೆದೆಗಳು ಸುಟ್ಟು ಭಸ್ಮವಾಗುತ್ತಿವೆ. ಸುಡು ಬಿಸಿಲಿನ ತಾಪಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸುವುದು ಸಾಮಾನ್ಯ. ಈ ವೇಳೆ ವಾಹನವನ್ನು ರಸ್ತೆಯಲ್ಲಿ ವೇಗವಾಗಿ ಓಡಿಸಲಾಗದೆ ಸಿಬ್ಬಂದಿ ಬರುವಷ್ಟರಲ್ಲಿ ಅಪಾರ ಪ್ರಮಾಣದ ಹಾನಿಯಾಗಿರುವ ಉದಾಹರಣೆ ಸಾಕಷ್ಟಿವೆ. ಜನರು ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಹರಿಹಾಯ್ದು ಹಿಡಿಶಾಪ ಹಾಕುವ ದುಸ್ಥಿತಿ ನಿರ್ಮಾಣವಾಗಿದೆ.
ಅಡಕತ್ತರಿಯಲ್ಲಿ ಅಧಿಕಾರಿಗಳು: ನೋಂದಣಿ ರದ್ದಾಗಿರುವುದರಿಂದ ಹಾಗೂ ಬೇಸಿಗೆ ಕಾಲವಾಗಿರುವುದರಿಂದ ತುರ್ತು ವಾಹನಗಳನ್ನು ತಾಲೂಕಿಗೆ ನೀಡುವಂತೆ ಅಗ್ನಿಶಾಮಕ ಅಧಿಕಾರಿಗಳು ಹಲವು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ತುರ್ತು ಕರೆಗಳು ಕಚೇರಿಗೆ ಬಂದಾಗ ವಿಧಿಯಿಲ್ಲದೆ ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ವಂತ ಜವಾಬ್ದಾರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತ ವಾಹನ ಚಲಾಯಿಸಿದರೆ ಕಾನೂನು ಉಲ್ಲಂಘನೆ, ಮತ್ತೊಂದು ಕಡೆ ತುರ್ತು ಕರೆಗೆ ಸ್ಪಂದಿಸಿಲ್ಲವೆಂದರೆ ಕರ್ತವ್ಯಲೋಪ ಎನ್ನಲಾಗುತ್ತದೆ.
ವರ್ಷದಲ್ಲಿ 149 ಅವಘಡ: ಕಳೆದ ಒಂದು ವರ್ಷದಲ್ಲಿ ತಾಲೂಕಿನಲ್ಲಿ ಒಟ್ಟು 149 ಅಗ್ನಿ ಅವಘಡಗಳು ಸಂಭವಿಸಿದ್ದು, ಅವುಗಳಲ್ಲಿ 147 ಪ್ರಕರಣಗಳು ಸಣ್ಣ ಪ್ರಮಾಣದ ಅವಘಡಗಳಾಗಿದ್ದು, 1 ಮಧ್ಯಮ ಪ್ರಮಾಣದಾದರೆ, ಮತ್ತೊಂದು ಗಂಭೀರ ಸ್ವರೂಪದ ಅವಘಡಗಳಾಗಿವೆ. ಈ ಪೈಕಿ ಒಟ್ಟು ಮೌಲ್ಯ 8.51 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ 2.55 ಕೋಟಿ ರೂ. ಮೌಲ್ಯದ ಬಾಬ್ತು ನಷ್ಟವಾಗಿದ್ದು, 5.49 ಕೋಟಿ ರೂ. ಬಾಬ್ತನ್ನು ರಕ್ಷಿಸಲಾಗಿದೆ. ತುರ್ತು ವಾಹನಗಳ ನೋಂದಣಿ ರದ್ದಾಗಿದ್ದರೂ ವಾಹನಗಳ ಬಳಕೆ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಗ್ನಿಶಾಮಕ ಠಾಣಾಧಿಕಾರಿ ತಿಳಿಸಿದ್ದಾರೆ.
ಅಗ್ನಿಶಾಮಕ ವಾಹನಗಳು ತುರ್ತು ಸೇವೆಗೆ ಅಗತ್ಯವಾಗಿದ್ದು, ಸಾರ್ವಜನಿಕ ಹಿತಾಸಕ್ತಿಯಿಂದ ಸರ್ಕಾರಿ ನೋಂದಣಿಯ ವಾಹನಗಳನ್ನು ಸೀಜ್ ಮಾಡಲು ಅವಕಾಶವಿರುವುದಿಲ್ಲ. ವಾಹನದ ಫಿಟ್‌ನೆಸ್ ವಾಯ್ದೆ ಮುಗಿದಿದ್ದು, ನೋಂದಣಿ ರದ್ದಾಗಿರುವುದರಿಂದ ನಿಯಮದ ಪ್ರಕಾರ ವಾಹನ ಬಳಸುವಂತಿಲ್ಲ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ತಿಳಿವಳಿಕೆ ನೋಟಿಸ್ ನೀಡಲಾಗುತ್ತದೆ. ಆದರೆ ಸರ್ಕಾರದ ಹಂತದಲ್ಲಿ ತುರ್ತುಸೇವಾ ವಾಹನಗಳಿಗೆ ನಿಯಮ ಸಡಿಲಿಕೆ ಮಾಡಿ ಮತ್ತೆ 6 ತಿಂಗಳು ಮುಂದುವರಿಸಲು ಅವಕಾಶವಿರುತ್ತದೆ. ಆ ರೀತಿ ಏನಾದರೂ ಅವಕಾಶ ನೀಡಿದರೆ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಅವಕಾಶ ಕಲ್ಪಿಸಬಹುದಾಗಿದೆ.
> ಮಲ್ಲಿಕಾರ್ಜುನ್ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ನಾಗಮಂಗಲ
ಸಚಿವರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಕೋಟ್ಯಾಂತರ ರೂ.ಖರ್ಚು ಮಾಡಿ ಹೊಸ ಕಾರುಗಳನ್ನು ಖರೀದಿಸುವ ಹಾಗೂ ವಿಧಾನಸೌಧದಲ್ಲಿ ಶಾಸಕರಿಗಾಗಿ ಕೋಟಿ ರೂ.ವೆಚ್ಚದಲ್ಲಿ ಸೋಫ, ಮಸಾಜ್ ಚೇರ್‌ಗಳನ್ನು ಹಾಕುವ ಸರ್ಕಾರಕ್ಕೆ ತುರ್ತು ಸೇವೆ ನೀಡುವತ್ತ ಮನಸ್ಸಿಲ್ಲವಾಗಿದೆ. ಜನಸಾಮಾನ್ಯರು ಕಾನೂನು ಉಲ್ಲಂಘನೆ ಮಾಡಿದರೆ ದಂಡ, ಜೈಲು ಎನ್ನುತ್ತಿರುವ ಸರ್ಕಾರವೇ ನಿಯಮ ಉಲ್ಲಂಘನೆ ಮಾಡುತ್ತಿದ್ದು ಇದಕ್ಕೆ ಯಾರನ್ನು ಹೊಣೆ ಮಾಡಬೇಕು. ನೂತನ ವಾಹನಗಳನ್ನು ನೀಡುವವರೆಗೂ ತಾಲೂಕಿನಲ್ಲಿ ಅಗ್ನಿ ಅವಘಡದಿಂದಾಗುವ ಎಲ್ಲ ನಷ್ಟವನ್ನು ಸರ್ಕಾರವೇ ಭರಿಸಬೇಕು.
> ಮಂಜುನಾಥ್ ಎಚ್.ಕ್ಯಾತನಹಳ್ಳಿ ಡಿಎಸ್‌ಎಸ್ ಮುಖಂಡ ಹಾಗೂ ಜನಪರ ಹೋರಾಟಗಾರ