ವಾಹನ ಸವಾರರಿಗೆ ಅಪಾಯ

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಬೇಕೆನ್ನುವ ತರಾತುರಿಯಲ್ಲಿರುವ ಗುತ್ತಿಗೆದಾರ, ರಸ್ತೆಯನ್ನು ಎರ‌್ರಾಬಿರ‌್ರಿ ಅಗೆದು ಹಾಕಿದ್ದು, ವಾಹನ ಸವಾರರ ಪ್ರಾಣ ಹಿಂಡುತ್ತಿದ್ದರೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದೆ…
ಇದು ದೇರಳಕಟ್ಟೆ- ಕುತ್ತಾರ್ ರಸ್ತೆ ಕಾಮಗಾರಿಯ ಕಥೆ..!
ನಾಟೆಕಲ್‌ನಿಂದ ಕುತ್ತಾರ್‌ವರೆಗಿನ ಎರಡೂವರೆ ಕಿ.ಮೀ. ಅಂತರದಲ್ಲಿ ನಾಲ್ಕು ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಿವೆ. ಮುಡಿಪು ಐಟಿ ಸಂಸ್ಥೆ ಹಾಗೂ ಮಂಗಳೂರು ವಿಶ್ವವಿದ್ಯಾಲಯಕ್ಕೂ ಇದುವೇ ಸಂಪರ್ಕ ರಸ್ತೆ. ಈ ಹಿನ್ನೆಲೆಯಲ್ಲಿ ದಿನವಿಡೀ ವೈದ್ಯರು, ಪ್ರೊಫೆಸರ್‌ಗಳು, ಟೆಕ್ಕಿಗಳು, ವಿದೇಶಿಯರು, ಆಸ್ಪತ್ರೆಗೆ ಬರುವ ರಾಜ್ಯ, ಹೊರರಾಜ್ಯದ ರೋಗಿಗಳು, ಅವರ ಸಂಬಂಧಿಕರು, ವಿದ್ಯಾರ್ಥಿಗಳು, ಸಾರ್ವಜನಿಕರಿಂದ ದಿನವಿಡೀ ರಸ್ತೆ ವಾಹನ ಸಂಚಾರದಿಂದ ಕೂಡಿರುತ್ತದೆ. ಈ ಕಾರಣಕ್ಕಾಗಿ ನಾಟೆಕಲ್‌ವರೆಗೆ ರಸ್ತೆ ಸುಸಜ್ಜಿತ ರೀತಿಯಲ್ಲಿ ವಿಸ್ತರಣೆಯೊಂದಿಗೆ ಸುಂದರಗೊಳಿಸುವುದು ಸಚಿವರ ಕನಸು. ಇದಕ್ಕಾಗಿ 40 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಡಿ ಈಗಾಗಲೇ ಕೆ.ಎಸ್.ಹೆಗ್ಡೆ ಆಸ್ಪತ್ರೆ ಬಳಿ ಐದು ಕೋಟಿಯ ಕಾಮಗಾರಿ ಮುಗಿದಿದ್ದು, ಕೆಲವು ದಿನಗಳಿಂದ ಮತ್ತೆ ಐದು ಕೋಟಿಯ ಕಾಮಗಾರಿ ಮುಂದುವರಿಸಲಾಗಿದೆ.

ಎರ‌್ರಾಬಿರ‌್ರಿ ಅಗೆತ ತಂದ ಪ್ರಾಣ ಸಂಕಟ!
ಮೊದಲ ಹಂತದ ಕಾಮಗಾರಿ ಸಮರ್ಪಕ ಯೋಜನೆಯಂತೆ ನಡೆದಿದೆ. ಈ ಸಂದರ್ಭ ರಸ್ತೆಯ ಒಂದು ಬದಿ ಅಗೆಯುವ ಮೊದಲು ಇನ್ನೊಂದು ಬದಿಯಲ್ಲಿ ಡಾಂಬರು ಹಾಕಿದ ರಸ್ತೆ ನಿರ್ಮಿಸುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಎರಡನೇ ಹಂತದ ಕಾಮಗಾರಿ ಆರಂಭ ಸಮರ್ಪಕವಾಗಿತ್ತಾದರೂ ನಂತರದ ದಿನಗಳಲ್ಲಿ ರಸ್ತೆಯನ್ನು ಮನಬಂದಂತೆ ಅಗೆಯಲಾಗಿದೆ. ಕಲ್ಲು, ಧೂಳಿನಿಂದ ವಾಹನಗಳು ಅದರಲ್ಲೂ ದ್ವಿಚಕ್ರ ವಾಹನ ಸಂಚಾರ ದುಸ್ತರ ಎನಿಸಿದೆ. ಅಗೆದ ರಸ್ತೆಗೆ ನೀರು ಹಾಕಲಾಗುತ್ತಿದ್ದರೂ ಬಿಸಿಲ ಜಳಕ್ಕೆ ಹೆಚ್ಚು ಹೊತ್ತು ಉಳಿಯುತ್ತಿಲ್ಲ. ಯಾವ ಕಡೆ ತಿರುಗಬೇಕು, ಯಾವ ರಸ್ತೆಯಲ್ಲಿ ಸಂಚರಿಸಬೇಕು ಎನ್ನುವ ಸೂಚನೆ ಒಂದೆರಡು ಕಡೆ ಸಣ್ಣದಾಗಿ ಹಾಕಲಾಗಿದ್ದರೂ ವಾಹನ ಚಾಲಕರಿಗೆ ತಕ್ಷಣಕ್ಕೆ ಕಾಣದ ಕಾರಣ ಸಣ್ಣ ಪುಟ್ಟ ಅಪಘಾತಗಳು ನಡೆಯುತ್ತಿವೆ. ರಾತ್ರಿ ಹೊತ್ತಿನಲ್ಲಂತೂ ವಾಹನ ಸವಾರರು ಸಂಪೂರ್ಣ ಗೊಂದಲಕ್ಕೆ ಒಳಗಾಗುತ್ತಿದ್ದು ಗುತ್ತಿಗೆದಾರನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮಳೆಗಾಲಕ್ಕೆ ಮುನ್ನ ಮುಗಿಸುವ ತರಾತುರಿ?
ಮೊದಲ ಹಂತದ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಮಳೆ ಬಂದಿದ್ದು ರಸ್ತೆ ಸಂಪೂರ್ಣ ಕೆಸರಿನಿಂದಾವೃತವಾಗಿ ವಾಹನ ಸಂಚಾರವೇ ಅಸಾಧ್ಯವಾಗಿತ್ತು. ಬಳಿಕ ಮಾಡೂರು ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂತಹದ್ದೇ ಪರಿಸ್ಥಿತಿ ಮತ್ತೆ ಬಾರದಿರಲಿ ಎನ್ನುವ ನೆಲೆಯಲ್ಲಿ ತರಾತುರಿಯಲ್ಲಿ ರಸ್ತೆ ಅಗೆಯಲಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಇಂತಹ ಉದ್ದೇಶ ಉತ್ತಮವಾಗಿದ್ದರೂ ಸಾರ್ವಜನಿಕರು, ವಾಹನ ಸವಾರರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೂ ಕೇಳಿಬಂದಿದೆ.

ರಸ್ತೆ ಕಾಮಗಾರಿ ಸಂದರ್ಭ ವಾಹನ ಸವಾರರು ಮತ್ತು ಸಾರ್ವಜನಿಕರ ಸುರಕ್ಷತೆ ಮುಖ್ಯ. ಈ ನಿಟ್ಟಿನಲ್ಲಿ ಅಗತ್ಯವಿರುವಲ್ಲಿ ಸೂಚನಾ ಫಲಕ ಮತ್ತು ಚಿಹ್ನೆಗಳನ್ನು ಅಳವಡಿಸಬೇಕು. ರಸ್ತೆಯ ಗುಣಮಟ್ಟ ಪರಿಶೀಲಿಸಬೇಕಿದ್ದು, ಈ ಬಗ್ಗೆ ಗುತ್ತಿಗೆದಾರರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.
ಯು.ಟಿ.ಖಾದರ್, ಸಚಿವ

ವಾಹನ ನಿಬಿಡ ಪ್ರದೇಶವಾಗಿರುವ ದೇರಳಕಟ್ಟೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಿಜವಾಗಿಯೂ ಅತ್ಯಗತ್ಯ. ಈಗ ನಡೆಯುತ್ತಿರುವ ಕಾಮಗಾರಿ ಸಂದರ್ಭ ರಸ್ತೆಯನ್ನೆಲ್ಲಾ ಅಗೆಯಲಾಗಿದ್ದು, ಸರಿಯಾದ ಮಾರ್ಗಸೂಚಿ ಹಾಕದೆ ನಿರ್ಲಕ್ಷೃ ತಾಳಲಾಗಿದೆ. ಇದು ಅಪಾಯಕ್ಕೆ ಅವಕಾಶ ನೀಡುವಂತಿದೆ.
ಮೋಹನ್ ಶಿರ್ಲಾಲ್, ದೈಹಿಕ ಶಿಕ್ಷಣ ಶಿಕ್ಷಕರು