ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ತಂಡಗ ಗ್ರಾಮ ಸಜ್ಜು

ಹೊಸದುರ್ಗ: ತಾಲೂಕಿನ ತಂಡಗ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಆಯೋಜಿಸಿದ್ದು, ಸ್ಥಳೀಯ ಸಮಸ್ಯೆಗಳಿಗೆ ಮುಕ್ತಿ ದೊರೆಯುವ ವಿಶ್ವಾಸದೊಂದಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿ ಗಿರೀಶ್, ಶಾಸಕ ಗೂಳಿಹಟ್ಟಿ ಡಿ. ಶೇಖರ್ ಶುಕ್ರವಾರ ಸಂಜೆ 4ಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಿದ್ದಾರೆ. ನಂತರ ಗ್ರಾಮದ ಬಿಸಿಎಂ ಹಾಸ್ಟೆಲ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ತಹಸೀಲ್ದಾರ್ ಕವಿರಾಜ್ ಎರಡು ದಿನಗಳಿಂದ ತಂಡಗ ಗ್ರಾಮದಲ್ಲಿ ಮೊಕ್ಕಾಂ ಹೂಡಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುವ ವಿಶ್ವಾಸ ಸ್ಥಳಿಯರಿಂದ ವ್ಯಕ್ತವಾಗಿದೆ.

ಸ್ಥಳೀಯ ಸಮಸ್ಯೆಗಳು: ತಂಡಗ ಗ್ರಾಪಂ ವ್ಯಾಪ್ತಿಯಲ್ಲಿ ಸಾರಿಗೆ ಸೌಲಭ್ಯವಿಲ್ಲದೆ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಹೊಸದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆರಂಭವಾಗಿದ್ದು, ತಂಡಗ ಮೂಲಕ ಪಂಚನಹಳ್ಳಿಗೆ ಬಸ್ ಓಡಿಸಬೇಕೆಂಬುದು ಗ್ರಾಮಸ್ಥರ ಬಹುಮುಖ್ಯ ಬೇಡಿಕೆ.

ತಂಡಗ ಗ್ರಾಮ ತುಮಕೂರು, ಚಿಕ್ಕಮಗಳೂರು, ಹಾಸನ ಜಿಲ್ಲಾ ಗಡಿಗಳಿಗೆ ಸನಿಹದಲ್ಲಿದೆ. ನಿತ್ಯದ ಕೆಲಸಗಳಿಗೆ ಜನರು ನೆರೆಯ ಜಿಲ್ಲೆಗಳಿಗೆ ಹೋಗಿ ಬರಲು ಸರಿಯಾದ ರಸ್ತೆಯಿಲ್ಲ. ತಂಡಗದಿಂದ ಪಂಚನಹಳ್ಳಿ ನಡುವೆ ಸುಸಜ್ಜಿತ ಡಾಂಬರು ರಸ್ತೆ ನಿರ್ಮಿಸಿದರೆ ಸಂಚಾರ ವ್ಯವಸ್ಥೆ ಸುಗಮವಾಗಲಿದೆ.

ಗ್ರಾಮದ ಮಾರುತಿ ನಗರ ಬಡಾವಣೆಗೆ ಸಿಸಿ ರಸ್ತೆಗೆ ಬೇಡಿಕೆಯಿದೆ. ಲಂಬಾಣಿ ತಾಂಡಾದಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಗ್ರಾಪಂ ವ್ಯಾಪ್ತಿಯ ಯಾದಘಟ್ಟಕ್ಕೆ ಶುದ್ಧ ಕುಡಿವ ನೀರಿನ ಘಟಕಕ್ಕೆ ಅವಶ್ಯವಿದೆ. ಕೃಷ್ಣಾಪುರ, ಹನುಮನಹಟ್ಟಿ, ಯಾದಘಟ್ಟ ಸೇರಿ ಒಂದು ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಬೇಕಿದೆ.

ಶಿಥಿಲ ಗ್ರಾಮಸೌಧ: ತಂಡಗ ಗ್ರಾಪಂ ಕಟ್ಟಡ ಶಿಥಿಲಗೊಂಡಿದ್ದು, ನೂತನ ಕಟ್ಟಡ ನಿರ್ಮಾಣವಾಗಬೇಕಿದೆ. ಹೊಸ ಕಟ್ಟಡ ನಿರ್ಮಾಣವಾದರೆ ಕಂಪ್ಯೂಟರ್ ಮತ್ತಿತರ ಉಪಕರಣಗಳ ರಕ್ಷಣೆ ಹಾಗೂ ನಿರ್ವಹಣೆಗೆ ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯರು.

ರಾಗಿಮುದ್ದೆ ಸೊಪ್ಪಿನಸಾರು: ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಬಿಸಿಎಂ ವಿಧ್ಯಾರ್ಥಿ ನಿಲಯ ಸಜ್ಜಾಗಿದೆ. ಜಿಲ್ಲಾಧಿಕಾರಿ, ಶಾಸಕರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ರಾಗಿಮುದ್ದೆ, ಸೊಪ್ಪಿನಸಾರು, ಅನ್ನ, ಮಜ್ಜಿಗೆ ಮೆನು ಸಿದ್ಧವಾಗಿದೆ.

ಮನೆ ಮಗನ ಸ್ವಾಗತಕ್ಕೆ ಸಜ್ಜು: ಜಿಲ್ಲಾಧಿಕಾರಿ ಗಿರೀಶ್ ಮೂಲತಃ ತಾಲೂಕಿನ ಶ್ರೀರಾಂಪುರದವರು. ಚಿತ್ರದುರ್ಗಕ್ಕೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ಮೊದಲ ಬಾರಿಗೆ ತಾಲೂಕಿಗೆ ಭೇಟಿ ನೀಡುತ್ತಿರುವುದಲ್ಲದೆ ಶ್ರೀರಾಂಪುರಕ್ಕೆ ಸಮೀಪದ ತಂಡಗ ಗ್ರಾಮದಲ್ಲಿ ಗ್ರಾಮವಾಸ್ತವ್ಯಕ್ಕೆ ಮುಂದಾಗಿರುವುದು ಜನರ ನೀರಿಕ್ಷೆ ಹೆಚ್ಚಿಸಿದೆ. ಮನೆಯ ಮಗನ ಸ್ವಾಗತಕ್ಕೆ ಸ್ಥಳೀಯರು ಸಜ್ಜಾಗಿದ್ದಾರೆ.