ಹುಲ್ಗಾರ್​ಬೈಲ್ ರಸ್ತೆ ದುರಸ್ತಿಗೆ ಆಗ್ರಹ

ಚಿಕ್ಕಮಗಳೂರು: ಎನ್.ಆರ್.ಪುರ ಸಮೀಪದ ಹುಲ್ಗಾರ್​ಬೈಲ್ ರಸ್ತೆ ದುರಸ್ತಿಪಡಿಸುವಂತೆ ಡಿಎಸ್​ಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಹುಲ್ಗಾರ್​ಬೈಲ್ ರಸ್ತೆ ಸಂಪೂರ್ಣ ಹಾಳಾಗಿ ಹಲವು ವರ್ಷಗಳಾಗಿವೆ. ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ರಸ್ತೆ ದುರಸ್ತಿಗಾಗಿ ಜಿಪಂ 21 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದರೂ ಕಾಮಗಾರಿ ಆರಂಭಗೊಂಡಿಲ್ಲ ಎಂದು ದೂರಿದರು.

ಮಳೆಗಾಲ ಆರಂಭವಾದರೆ ವಾಹನ ಮತ್ತು ಜನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ. ಹಾಗಾಗಿ ತಕ್ಷಣ ಕಾಮಗಾರಿ ಆರಂಭಿಸಬೇಕು. ಬೀಳುವ ಸ್ಥಿತಿಯಲ್ಲಿರುವ ಮಹಲ್ಗೋಡಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡವನ್ನು ತಕ್ಷಣ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದರು.

ಮಾಗುಂಡಿ ಗ್ರಾಪಂ ವ್ಯಾಪ್ತಿಯ ಗೊರಸಿನಗದ್ದೆ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಭೈರಾಪುರ ಸೇರಿ ಸುತ್ತಮುತ್ತಲ ಹಳ್ಳಿಗಳಿಗೆ ಮೂಲ ಸೌಲಭ್ಯ ಒದಗಿಸಬೇಕು. 94ಸಿ ಅಡಿ ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಹಕ್ಕುಪತ್ರ ನೀಡಬೇಕು. ಕರ್ಕೆಶ್ವರ ಗ್ರಾಮದ ಗದ್ದೆಮನೆ ಬಳಿ ಕೆರೆಗೆ ತಡೆಗೋಡೆ ನಿರ್ವಿುಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾತನಾಡಿ, ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಚುನಾವಣೆ ನಂತರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.