ಏ.15 ರಿಂದ 19 ರವರೆಗೆ ಚಿಕ್ಕಮಗಳೂರಲ್ಲಿ ನಿಷೇಧಾಜ್ಞೆ ಜಾರಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾಕ್ಷೇತ್ರ ಚುನಾವಣೆ ಪ್ರಯುಕ್ತ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶವಾಗದಂತೆ ಕಲಂ 144ರನ್ವಯ ಏ.16ರ ಸಂಜೆ 6 ಗಂಟೆಯಿಂದ 19ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ನಿಷೇಧಾಜ್ಞೆ ವೇಳೆ ಬಹಿರಂಗ, ಸಾರ್ವಜನಿಕ ಸಭೆ, ಸಮಾರಂಭ, ಜಾಥಾ ಮೆರವಣಿಗೆ ನಡೆಸುವುದನ್ನು ನಿರ್ಬಂಧಿಸಲಾಗಿದೆ. ನಿಷೇಧಿತ ಅವಧಿಯಲ್ಲಿ ಐವರಿಗಿಂತ ಹೆಚ್ಚು ಜನರು ಗುಂಪಾಗಿ ಸೇರಬಾರದು ಎಂಬ ನಿಯಮವಿದ್ದರೂ ಮತದಾನ ಮುಕ್ತಾಯದ ಮುಂಚಿನ 48 ಗಂಟೆ 10 ಜನರ ಮಿತಿಯೊಳಗೆ ಶಾಂತಿಯುತವಾಗಿ ಮನೆ ಮನೆಗೆ ತೆರಳಿ ಮತಯಾಚಿಸಬಹುದು.

ಈ ಅವಧಿಯಲ್ಲಿ ಆಯುಧ ಹಾಗೂ ಮಾರಕಾಸ್ತ್ರ ಹಿಡಿದು ಓಡಾಡುವಂತಿಲ್ಲ. ಪ್ರಚಾರ ಸಾಮಗ್ರಿಗಳನ್ನು ಹಿಡಿದುಕೊಂಡು ಘೊಷಣೆ ಕೂಗಿ ಪ್ರಚಾರ ಮಾಡಲು ಅವಕಾಶವಿಲ್ಲ. ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ವಾಹನ ಪ್ರವೇಶಿಸುವುದನ್ನು ನಿರ್ಬಂಧಿಸಿ ಆದೇಶಿಸಿದೆ.

ಮತದಾನದಂದು ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ, ಘೊಷಣೆ, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಪರ ಬ್ಯಾನರ್ ಹಾಗೂ ಪೋಸ್ಟರ್ ಹಾಕುವುದು, ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಧ್ವನಿವರ್ಧಕ, ಮೆಗಾಫೋನ್ ಇತ್ಯಾದಿ ಅಳವಡಿಸುವುದನ್ನು ನಿಷೇಧಿಸಲಾಗಿದೆ.

ಚುನಾವಣೆ ವೇಳೆ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಈ ಜಿಲ್ಲೆಯಲ್ಲಿ ಇರುವಂತಿಲ್ಲ ಎಂದು ಸೂಚಿಸಲಾಗಿದೆ. ಈ ನಿಬಂಧನೆಗಳು ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಆದರೆ ಈ ನಿಷೇಧಾಜ್ಞೆ ಮದುವೆ, ಗೃಹ ಪ್ರವೇಶ ಮತ್ತಿತರ ಕಾರ್ಯಕ್ರಮಗಳಿಗೆ ಅನ್ವಯಿಸದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *