ಸರ್ಪಗಾವಲಲ್ಲಿ ಟಿಪ್ಪು ಜಯಂತಿ

ಬೆಂಗಳೂರು: ವಿವಾದಾತ್ಮಕ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತವಾಗುವುದನ್ನು ಮುಂದಾಲೋಚಿಸಿರುವ ಸರ್ಕಾರ, ವಿಧಾನಸೌಧ ಬಿಟ್ಟು ಪೊಲೀಸರ ಸರ್ಪಗಾವಲಿನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. ಟಿಪ್ಪು ಜಯಂತಿಯನ್ನು ಈಗಾಗಲೇ ಸಂಘ ಪರಿವಾರದ ಸಂಘಟನೆಗಳು ವಿರೋಧಿಸಿ ಅನೇಕ ಕಡೆಗಳಲ್ಲಿ ಸಂವಾದ, ಪ್ರತಿಭಟನೆ, ಚರ್ಚೆಗಳನ್ನು ನಡೆಸಿವೆ. ಕೆಲವೆಡೆ ಮಾಧ್ಯಮ ಹೇಳಿಕೆ ಜತೆಗೆ ನ.10ರ ಜಯಂತಿ ದಿನದಂದು ಪ್ರತಿಭಟನೆ ನಡೆಸುವ ತಯಾರಿಯನ್ನೂ ಮಾಡಿಕೊಂಡಿವೆ. ಟಿಪು್ಪ ಜಯಂತಿ ಆಚರಿಸುವ ವೇಳೆ ಕಿಡಿಗೇಡಿಗಳು ಗಲಭೆ ಸೃಷ್ಟಿಸಿ ಕೋಮುಗಲಭೆಗೆ ಕಾರಣವಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಚರ್ಚೆ ನಡೆದಿದೆ. ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಪರಮೇಶ್ವರ್, ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಟಿಪ್ಪು ಜಯಂತಿ ಆಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಲು ತೀರ್ವನಿಸ ಲಾಗಿದೆ. ಮಧ್ಯಾಹ್ನ 2 ಗಂಟೆಯೊಳಗೆ ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಚರಿಸುವ ಎಲ್ಲ ಜಯಂತಿಗಳೂ ರವೀಂದ್ರ ಕಲಾಕ್ಷೇತ್ರದಲ್ಲಿಯೇ ನಡೆಯುತ್ತಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಟಿಪ್ಪು ಜಯಂತಿ ಪರ ಅಥವಾ ವಿರೋಧ ಯಾವುದೇ ಮೆರವಣಿಗೆಗಳಿಗೆ ಅವಕಾಶ ನೀಡಬಾರದು. ಎಲ್ಲ ಜಿಲ್ಲೆಗಳಲ್ಲೂ ಒಳಾಂಗಣದಲ್ಲಿ ಮಾತ್ರ ಕಾರ್ಯಕ್ರಮ ಆಯೋಜನೆ ಮಾಡಬೇಕು. ಜಯಂತಿ ನಡೆಯುವ ಸ್ಥಳ ಹೊರತುಪಡಿಸಿ ಬೇರೆಡೆ ಪೋಸ್ಟರ್, ಬ್ಯಾನರ್ ಹಾಕುವಂತಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೂ ನಿಗಾವಹಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ಆಚರಣೆ ಪ್ರಶ್ನಿಸಿ ಮತ್ತೊಂದು ಪಿಐಎಲ್

ಬೆಂಗಳೂರು: ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿರುವ ಆದೇಶ ರದ್ದುಕೋರಿ ಹೈಕೋರ್ಟ್​ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿ 2017ರಲ್ಲಿ ಪಿಐಎಲ್ ಸಲ್ಲಿಸಿದ್ದ ಮಡಿಕೇರಿಯ ಹೈಸೊಲ್ದೂರು ನಿವಾಸಿ ಕೆ.ಪಿ. ಮಂಜುನಾಥ್, ಈಗ ಮತ್ತೊಂದು ಪಿಐಎಲ್ ಸಲ್ಲಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2016ರ ಸೆ.20ರಂದು ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಈ ಹಿಂದಿನ ಅರ್ಜಿ ವಿಚಾರಣೆಯೇ ಬಾಕಿ ಇದೆ. ಆಗ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಫಲವಾಗಿದ್ದ ಸರ್ಕಾರಕ್ಕೆ ನ್ಯಾಯಾಲಯ 1 ಸಾವಿರ ದಂಡವನ್ನೂ ವಿಧಿಸಿದೆ. ಹೀಗಿದ್ದರೂ ಈ ವರ್ಷ ಟಿಪು್ಪ ಜಯಂತಿ ಆಚರಿಸುವ ಸಂಬಂಧ 2018ರ ನ.2ರಂದು ಆದೇಶ ಹೊರಡಿಸಲಾಗಿದ್ದು, ಆಚರಣೆಗೆ ತಡೆ ನೀಡಬೇಕೆಂದು ಕೋರಿದ್ದಾರೆ.

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನ.9ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಲ್ಲಿ ವಿಶೇಷವಾಗಿ ಪ್ರತಿಭಟನೆ ನಡೆಸಲಾಗುವುದು.

| ಆರ್.ಅಶೋಕ್, ಬಿಜೆಪಿ ಮುಖಂಡ

 

ರಾಜ್ಯದ ಜನರ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿಷ್ಠೆಯ ವಿಷಯವನ್ನಾಗಿ ಮಾಡದೆ ಟಿಪ್ಪುಜಯಂತಿ ಆಚರಣೆಯನ್ನು ಸರ್ಕಾರ ಕೈ ಬಿಡಬೇಕು. ನೆಮ್ಮದಿಯ ದೀಪಾವಳಿ ಆಚರಣೆಗೆ ಅನುವು ಮಾಡಿಕೊಡಬೇಕು.

| ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ

 

ಟಿಪ್ಪು ಜಯಂತಿಗೆ ನಮ್ಮ ವಿರೋಧವಿದ್ದು, ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನ ಹಾಕಬೇಡಿ ಎಂದು ಮೈಸೂರು ಮತ್ತು ಕೊಡಗು ಜಿಲ್ಲಾಧಿಕಾರಿಗೆ ಈಗಾಗಲೇ ತಿಳಿಸಿದ್ದೇನೆ.

| ಪ್ರತಾಪ್ ಸಿಂಹ, ಸಂಸದ