ಬೆಳಗಾವಿ: ಈ ಭಾರಿಯ ಚನ್ನಮ್ಮನ ಕಿತ್ತೂರು ಉತ್ಸವದ ಬಂದೋಬಸ್ತ್ ಕೆಲಸವನ್ನು ಪೊಲೀಸರು, ಡಿಆರ್ ಮತ್ತು ಕೆಎಸ್‌ಆರ್‌ಪಿಯ ತಲಾ ನಾಲ್ಕು ವಾಹನ ತುಕಡಿಗಳು ನಿರ್ವಹಿಸುತ್ತಿವೆ. ಆದರೂ ಬುಧವಾರ ಮೆರವಣಿಗೆ ವೇಳೆ ಖಾಸಗಿ ಭದ್ರತಾ ಪಡೆಯನ್ನು ನಿಯೋಜಿಸಿ, ದುಬಾರಿ ವೆಚ್ಚ ಮಾಡಿದ್ದು ಏಕೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಈ ಖಾಸಗಿ ಪಡೆಯು ವಿಜಯಜ್ಯೋತಿ ಬರುವ ಸಮಯದಲ್ಲಿ ರಾಣಿ ಚನ್ನಮ್ಮನ ಪ್ರತಿಮೆ ಎದುರು ಬ್ಯಾರಿಕೇಡ್ ಹಾಕಿಕೊಂಡು ಒಳಗೆ ನಿಂತಿದ್ದರೆ, ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳು ಬ್ಯಾರಿಕೇಡ್ ಹೊರಗೆ ನಿಂತಿದ್ದರು. ಪುತ್ಥಳಿ ಬಳಿಗೆ ತೆರಳಬೇಕೆಂದರೆ ಖಾಸಗಿಯವರು ಅನುಮತಿ ಕೇಳುತ್ತಿದ್ದಾರೆ ಎಂದು ಕೆಲವರು ದೂರಿದರು.
ಆದರೆ, ಈ ಸ್ಥಳಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಆಗಮಿಸಿದ ನಂತರ ಅವರನ್ನು ಹೊರಗೆ ಕಳುಹಿಸಲಾಯಿತು. ಅಲ್ಲಿ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಯಿತು.
ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಭದ್ರತಾ ಪಡೆ ನೇಮಿಸಿಕೊಳ್ಳಲಾಗಿದೆ. ಈ ಬಗ್ಗೆ ಯಾವುದೇ ಸಮಿತಿ ಸಭೆಯಲ್ಲೂ ಚರ್ಚೆ ನಡೆದಿಲ್ಲ ಎಂದು ಜನರು ಹೇಳುತ್ತಿದ್ದಾರೆ.
ಕಿತ್ತೂರು ಉತ್ಸವದಲ್ಲಿ ಭದ್ರತಾ ಕಾರ್ಯ ಪೊಲೀಸರೇ ನಿರ್ವಹಿಸುತ್ತಿಸ್ದೇವೆ. ವೇದಿಕೆ ಬಳಿಯಷ್ಟೇ ಕಲಾವಿದರಿಗೆ ಭದ್ರತೆ ಕಲ್ಪಿಸಲು ಕಾರ್ಯಕ್ರಮ ಸಂಘಟಕರು ಬೌನ್ಸರ್ ಗಳನ್ನು ನೇಮಿಸಿದ್ದಾರೆ ಎಂದು ಎಸ್ಪಿ ಡಾ. ಭೀಮಾಶಂಕರ ಗುಳೇದ ಪ್ರತಿಕ್ರಿಯೆ ನೀಡಿದ್ದಾರೆ.