ಶ್ರೀರಾಮ ಮಂತ್ರ ಜಪಿಸಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಗಂಭೀರ್​ ಆಗ್ರಹ

ನವದೆಹಲಿ: ಮುಸ್ಲಿಂ ಟೋಪಿ ಧರಿಸಿದ್ದನ್ನು ವಿರೋಧಿಸಿ, ಶ್ರೀ ರಾಮ ಮಂತ್ರವನ್ನು ಜಪಿಸುವಂತೆ ಒತ್ತಾಯ ಮಾಡಿ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿಯನ್ನು ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿಯ ನೂತನ ಸಂಸದ ಗೌತಮ್​ ಗಂಭೀರ್​ ಖಂಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಬಿಜೆಪಿಗೆ ಸೇರಿ ಪೂರ್ವ ದೆಹಲಿ ಕ್ಷೇತ್ರದಿಂದ ಗೆಲುವು ಸಾಧಿಸಿ, ಮೊದಲ ಬಾರಿಗೆ ಸಂಸದನಾಗಿ ಸಂಸತ್ತು ಪ್ರವೇಶಿಸಿರುವ ಗಂಭೀರ್,​ ಮುಸ್ಲಿಂ ವ್ಯಕ್ತಿ ಮೇಲಿನ ಹಲ್ಲೆಯನ್ನು ಖಂಡಿಸಿ, ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಇಂದು(ಸೋಮವಾರ) ಬೆಳಗ್ಗೆ ಟ್ವೀಟ್ ಮೂಲಕ ಒತ್ತಾಯಿಸಿದ್ದು, ನಮ್ಮದು ಜ್ಯಾತ್ಯತೀತ ರಾಷ್ಟ್ರ ಎಂದು ತಿಳಿಸಿದ್ದಾರೆ.

ಗುರುಗ್ರಾಮದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಟೋಪಿ ತೆಗೆಯುವಂತೆ ಕೇಳಿ ಶ್ರೀರಾಮ ಮಂತ್ರವನ್ನು ಜಪಿಸುವಂತೆ ಒತ್ತಾಯಿಸಿರುವುದು ಶೋಚನೀಯ ಘಟನೆ. ಇದರಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಗುರುಗ್ರಾಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನಾವು ಜ್ಯಾತ್ಯತೀತ ರಾಷ್ಟ್ರವನ್ನು ಹೊಂದಿದ್ದೇವೆ ಎಂದು ಗಂಭೀರ್​ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಘಟನೆ ಹಿನ್ನೆಲೆ
ಕಳೆದ ಶನಿವಾರ ರಾತ್ರಿ ನಮಾಜ್‌ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ವೇಳೆ ಗುರುಗ್ರಾಮದ ದಾರಲ್‌ ಬಜಾರ್‌ ಲೇನ್‌ನಲ್ಲಿ ನಾಲ್ವರು ಯುವಕರು ತಾನು ಮುಸ್ಲಿಂ ಟೋಪಿ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನನ್ನ ಮೇಲೆ ಆಕ್ರಮಣ ಮಾಡಿದರು. ಈ ಪ್ರದೇಶದಲ್ಲಿ ಟೋಪಿಯನ್ನು ಧರಿಸುವಂತಿಲ್ಲ ಎಂದು ಬೆದರಿಕೆವೊಡ್ಡಿದರು. ಭಾರತ್‌ ಮಾತಾಕಿ ಜೈ ಎಂದು ಹೇಳುವಂತೆ ಒತ್ತಾಯಿಸಿ ನನ್ನ ಟೋಪಿಯನ್ನು ತೆಗೆದು ಕಪಾಳಮೋಕ್ಷ ಮಾಡಿದರು. ಅವರು ಹೇಳಿದಂತೆ ಭಾರತ್‌ ಮಾತಾಕಿ ಜೈ ಎಂದು ಕೂಗಿದೆ ಬಳಿಕ ಜೈ ಶ್ರೀರಾಮ್‌ ಎಂದು ಜಪಿಸುವಂತೆ ಹೇಳಿದರು. ನಾನು ನಿರಾಕರಿಸಿದೆ. ಈ ವೇಳೆ ರಸ್ತೆ ಬದಿಯಲ್ಲಿದ್ದ ಕೋಲನ್ನು ತೆಗೆದುಕೊಂಡು ಚೆನ್ನಾಗಿ ಥಳಿಸಿದರು. ನನ್ನ ಕಾಲು ಮತ್ತು ಬೆನ್ನಿಗೆ ಕರುಣೆ ಇಲ್ಲದಂತೆ ಬಾರಿಸಿದರು ಎಂದು ಮುಸ್ಲಿಂ ವ್ಯಕ್ತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಸಂತ್ರಸ್ತನಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಗುರುಗ್ರಾಮದ ಎಸಿಪಿ ರಾಜೀವ್ ಕುಮಾರ್‌ ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *