
ತರೀಕೆರೆ: ಜಾಗತಿಕ ತಾಪಮಾನ ಹೆಚ್ಚಳದಿಂದ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಸಸ್ಯ ಸಂಕುಲ ಸಮೃದ್ಧವಾಗಿ ಬೆಳೆದು ನಿಂತರೆ ನಾಡಿಗೆ ಉತ್ತಮ ಮಳೆಯಾಗಲಿದೆ ಎಂದು ತಾಪಂ ಇಒ ಟಿ.ಎಸ್.ಗಣೇಶ್ ಹೇಳಿದರು.
ಬೆಟ್ಟತಾವರಕೆರೆ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಆವರಣದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ತಾಪಂನ ನರೇಗಾ ಯೋಜನೆಯಡಿ ವಿವಿಧ ಜಾತಿಯ ಸಸಿ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಅಂತರ್ಜಲ ಕುಸಿತದಿಂದ ನೀರಿಗೆ ಪರದಾಡುವಂತಾಗಿದೆ. ಉತ್ತಮ ಪರಿಸರಕ್ಕಾಗಿ ಗಿಡ ಬೆಳೆಸುವ ಅಗತ್ಯವಿದೆ. ಬೆಟ್ಟತಾವರಕೆರೆ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲಾ ಆವರಣವನ್ನು ಹಸಿರೀಕರಣಗೊಳಿಸುವ ಸಲುವಾಗಿ 800ಕ್ಕೂ ಹೆಚ್ಚು ಸಸಿ ನೆಟ್ಟು ಪೋಷಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಸರ್ಕಾರ ಮಾತ್ರವಲ್ಲ, ಪ್ರತಿಯೊಬ್ಬರೂ ಪರಿಸರ ಕಾಳಜಿವಹಿಸಿ ಗಿಡ ಬೆಳೆಸಲು ಮುಂದಾಗಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ಗಾಳಿ, ನೀರು ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಸಾಮಾಜಿಕ ಅರಣ್ಯ ಇಲಾಖೆ ವಲಯಾಧಿಕಾರಿ ರುಕಿಯಾ ಪರ್ವೀನ್, ತರೀಕೆರೆ ತಾಲೂಕು ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್, ಅಜ್ಜಂಪುರ ತಾಲೂಕು ನರೇಗಾ ಯೋಜನೆ ಸಹಾಯಕ ನಿರ್ದೇಶಕ ನವೀನ್, ಡಿಆರ್‌ಎ್ಒ ಎಚ್.ಎನ್.ನವೀನ್ ಇತರರಿದ್ದರು.