ಕೈ ಪಾಳಯದಲ್ಲಿ ಬಿ ಫಾರಂ ರಾಜಕೀಯ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಬಳಿಕ ಉಂಟಾಗಿರುವ ಬಂಡಾಯ, ಗೊಂದಲ, ಗದ್ದಲದ ನಡುವೆಯೂ ಕಾಂಗ್ರೆಸ್ ಬಿ ಫಾರಂ ವಿತರಣೆ ಆರಂಭಿಸಿದೆ. ಮಂಗಳವಾರ ನಗರದ ಹೊರವಲಯದಲ್ಲಿರುವ ರೆಸಾರ್ಟ್​ವೊಂದಕ್ಕೆ ಅಭ್ಯರ್ಥಿಗಳಿಗೆ ಆಹ್ವಾನವಿತ್ತ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಬಿ ಫಾಮ್ರ್ ನೀಡಿ ಹಿತವಚನ ಹೇಳಿ ಕಳಿಸಿಕೊಟ್ಟರು. ನಂಬಿಕೆ ಕಾರಣಕ್ಕೆ ಆಹ್ವಾನ ನೀಡಿದವರ ಪೈಕಿ ಬಹುತೇಕರು ಬಿ ಫಾರಂ ಸ್ವೀಕರಿಸುವ ದಿನವನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದು ವಿಶೇಷ. 218 ಅಭ್ಯರ್ಥಿಗಳ ಪೈಕಿ 55 ಮಂದಿ ಮಾತ್ರ ಬಿ ಫಾರಂ ಸ್ವೀಕರಿಸಿದರು, ಉಳಿದವರೆಲ್ಲರೂ ಬುಧವಾರ ಸ್ವೀಕರಿಸಲಿದ್ದಾರೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಸಚಿವ ಕಾಗೋಡು ತಿಮ್ಮಪ್ಪ, ಯು.ಟಿ.ಖಾದರ್, ಮಾಜಿ ಮೇಯರ್ ಪದ್ಮಾವತಿ, ಶಿವರಾಂ ಹೆಬ್ಬಾರ್, ಹೂವಿನ ಹಡಗಲಿಯ ಪರಮೇಶ್ವರ್ ನಾಯ್್ಕ ಸಿ.ಎಸ್.ನಾಡಗೌಡ, ಎ.ಬಿ.ಮಾಲಕ ರೆಡ್ಡಿ, ಗೋಪಾಲ್ ಭಂಡಾರಿ, ತರೀಕೆರೆ ಅಭ್ಯರ್ಥಿ ನಾಗರಾಜ್, ಕುಷ್ಟಗಿ ಅಭ್ಯರ್ಥಿ ಅಮರೇಗೌಡ ಬಯ್ಯಾಪುರ, ಅರೆಬೈಲು ಶಿವರಾಂ ಹೆಬ್ಬಾರ್, ಔರಾದ್ ಕ್ಷೇತ್ರದ ವಿಜಯ ಕುಮಾರ್ ಕೌಡ್ಯಾಳ, ಕಲಘಟಗಿ ಸಂತೋಷ್ ಲಾಡ್, ಅನಿಲ್ ಲಾಡ್, ಬಳ್ಳಾರಿ ಗ್ರಾ. ನಾಗೇಂದ್ರ, ಗೋವಿಂದ ರಾಜನಗರ ಪ್ರಿಯಕೃಷ್ಣ, ಜಮೀರ್ ಅಹಮದ್, ಅಖಂಡ ಶ್ರೀನಿವಾಸ ಮೂರ್ತಿ, ಗುರಪ್ಪ ನಾಯ್ಡು, ಜಯನಗರದ ಸೌಮ್ಯಾ ರೆಡ್ಡಿ ಬಿ ಫಾರಂ ಪಡೆದ ಪ್ರಮುಖರು.

ಬಾದಾಮಿ ಗೌಪ್ಯ

ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕಾಗಿಯೇ ಇತ್ತೀಚೆಗೆ ಹೆಚ್ಚು ಪ್ರಸ್ತಾಪವಾದ ಬಾದಾಮಿ ಕ್ಷೇತ್ರದ ಬಿ ಫಾರಂ ವಿಚಾರದಲ್ಲಿ ಕಾಂಗ್ರೆಸ್ ಗೌಪ್ಯತೆ ಕಾಪಾಡುತ್ತಿದೆ. ಮಂಗಳವಾರ ನಡೆದ ಹೈಡ್ರಾಮದಲ್ಲಿ ಹಾಲಿ ಶಾಸಕ ಚಿಮ್ಮನಕಟ್ಟಿ ರೆಸಾರ್ಟ್​ಗೆ ಆಗಮಿಸಿ, ದೇವರಾಜ ಪಾಟೀಲ್​ಗೆ ಬಿ ಫಾರಂ ಕೊಡಬಾರದೆಂದು ಪಟ್ಟು ಹಿಡಿದರು. ಸಿಎಂ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಬಾದಾಮಿ ಬಿಟ್ಟು ಕೊಟ್ಟೆ. ಈಗ ನೋಡಿದರೆ ಸಿಎಂ ಸ್ಪರ್ಧಿಸುವುದಿಲ್ಲ, ನನಗೂ ಟಿಕೆಟ್ ಇಲ್ಲ. ಈ ರೀತಿ ಮಾಡುವುದು ಸರಿಯಲ್ಲ ಎಂದು ಪರಮೇಶ್ವರ್ ಬಳಿ ವಾದಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ದೇವರಾಜ ಪಾಟೀಲ್​ಗೂ ಬಿ ಫಾರಂ ಕೊಡುತ್ತಿಲ್ಲ. ಸ್ವಲ್ಪ ದಿನ ಕಾಯುವಂತೆ ಎಂದು ಸಿಎಂ ಸೂಚಿಸಿದ್ದಾರೆ ಎಂದು ಚಿಮ್ಮನಕಟ್ಟಿಯವರನ್ನು ಸಮಾಧಾನಿಸಿ ಕಳಿಸಿದರು. ಈ ಬೆಳವಣಿಗೆ ಗಮನಿಸುತ್ತಿದ್ದಂತೆ ದೇವರಾಜ ಅವರು ರೆಸಾರ್ಟ್​ಗೆ ಆಗಮಿಸಿ ಬಿ ಫಾರಂ ನೀಡುವಂತೆ ಪಟ್ಟು ಹಿಡಿದರು. ಕಳೆದ ಬಾರಿ ಚಿಮ್ಮನಕಟ್ಟಿಯವರು ಆತ್ಮಹತ್ಯೆಗೆ ಪ್ರಯತ್ನಿಸಿದರು ಎಂಬ ಕಾರಣಕ್ಕೆ ಕ್ಷೇತ್ರ ಬಿಟ್ಟುಕೊಟ್ಟೆ. ಈ ಬಾರಿ ನನಗೇ ಕೊಡಬೇಕು ಎಂದರು. ಆದರೆ ಪರಮೇಶ್ವರ್ ಸದ್ಯಕ್ಕೆ ಈ ಕ್ಷೇತ್ರದ ಬಿ ಫಾರಂ ಕೊಡದೇ ಇರುವ ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿ ದೇವರಾಜರನ್ನು ವಾಪಾಸು ಕಳಿಸಿದರು.

3 ಕ್ಷೇತ್ರದ್ದು ಪೆಂಡಿಂಗ್

ಬಾದಾಮಿ ಅಲ್ಲದೆ, ಜಗಳೂರು ಕ್ಷೇತ್ರಕ್ಕೆ ಹಾಲಿ ಶಾಸಕ ಎಚ್.ಪಿ.ರಾಜೇಶ್ ತೀವ್ರ ಆಕ್ಷೇಪ ಎತ್ತಿರುವುದು ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಒತ್ತಡ ತಂದ ಕಾರಣ ಪುಷ್ಪಾವತಿಗೆ ಬಿ ಫಾರಂ ವಿತರಿಸಿಲ್ಲ. ಮಡಿಕೇರಿ ಕ್ಷೇತ್ರಕ್ಕೆ ವಕೀಲ ಚಂದ್ರಮೌಳಿ ಹೆಸರು ಅಂತಿಮಗೊಂಡಿದ್ದರೂ ಬಿಜೆಪಿ ಮತ್ತು ಸ್ವಪಕ್ಷೀಯರ ಟ್ವೀಟರ್ ಟೀಕೆ ಕಾರಣಕ್ಕೆ ಬಿ ಫಾರಂ ವಿತರಿಸಲು ಕೆಪಿಸಿಸಿ ಹಿಂದೇಟು ಹಾಕಿದೆ. ಎಚ್.ಪಿ.ರಾಜೇಶ್ ರೆಸಾರ್ಟ್​ಗೆ ಆಗಮಿಸಿ ‘ನನಗೇಕೆ ಟಿಕೆಟ್ ನಿರಾಕರಿಸುತ್ತೀರಾ’ ಎಂದು ಪರಮೇಶ್ವರ್​ರನ್ನು ಪ್ರಶ್ನಿಸಿದರು. 31ಕ್ಕೂ ಹೆಚ್ಚು ಶಾಸಕರು ಸೋಲುತ್ತಾರೆಂದು ನಿಮ್ಮದೇ ವರದಿ ಇದೆ. ಸೋಲುವವರೆಲ್ಲರಿಗೂ ಏಕೆ ಟಿಕೆಟ್ ಕೊಡುತ್ತೀರಾ’ ಎಂದು ಏರಿದ ದನಿಯಲ್ಲಿ ತರಾಟೆ ತೆಗೆದುಕೊಂಡರೆಂದು ಮೂಲಗಳು ತಿಳಿಸಿವೆ. ಕೊನೆಗೆ ಪರಮೇಶ್ವರ್ ಅವರು ರಾಜೇಶ್ ಸಮಾಧಾನಪಡಿಸಿ ಕಳಿಸಿದರು.

ಎ.ಮಂಜುವಿಗೆ ಛೀಮಾರಿ

ಹಾಸನ: ಮತಯಾಚನೆಗೆ ತೆರಳಿದ್ದ ಸಚಿವ ಎ.ಮಂಜು ಅವರಿಗೆ ಅರಕಲಗೂಡು ಪಟ್ಟಣದ ಕೆಲ್ಲೂರು ವಾರ್ಡ್ ನಿವಾಸಿಗಳು ಸೋಮವಾರ ರಾತ್ರಿ ಛೀಮಾರಿ ಹಾಕಿದರು. ‘10 ವರ್ಷಗಳ ಬಳಿಕ ಮತ ಕೇಳಲು ಬಂದಿದ್ದೀರಿ, ಗ್ರಾಮಸ್ಥರಿಗೆ ಬದುಕಲು ಭೂಮಿ ಇಲ್ಲ, ಸ್ಮಶಾನಕ್ಕೂ ಜಾಗ ಇಲ್ಲ, ಸಮಸ್ಯೆ ಬಗೆಹರಿಸದೆ ಚುನಾವಣೆ ಸಮಯದಲ್ಲಿ ಮಾತ್ರ ಓಟಿಗಾಗಿ ಬಂದಿದ್ದೀರಿ’ ಎಂದು ಸಚಿವರನ್ನು ತರಾಟೆ ತೆಗೆದುಕೊಂಡರು. ‘ರಸ್ತೆ ಅಭಿವೃದ್ಧಿಪಡಿಸ ಲಾಗಿದೆ’ ಎಂದು ಸಚಿವರು ಸಮಾಧಾನಪಡಿಸಲು ಯತ್ನಿಸಿದರೂ ಜನರ ಸಿಟ್ಟು ಶಮನವಾಗಲಿಲ್ಲ. ಈ ಸಂದರ್ಭ ಕೆಲವರು ಏರುಧ್ವನಿಯಲ್ಲಿ ಕೂಗಾಡಿದ್ದರಿಂದ ಗದ್ದಲ ಶುರುವಾಯಿತು. ನಂತರ ಸಚಿವರು ಅಲ್ಲಿಂದ ತೆರಳಿದರು.

ಅಂಬರೀಷ್ ಮನೆಗೇ ಟಿಕೆಟ್!

ಮಂಡ್ಯ ಕ್ಷೇತ್ರದ ಹಾಲಿ ಶಾಸಕ ಅಂಬರೀಷ್ ಮನೆಗೆ ಬಿ ಫಾರಂ ಕಳಿಸಲು ಕೆಪಿಸಿಸಿ ನಿರ್ಧರಿಸಿದೆ. ಮಂಗಳವಾರ ಬಿ ಫಾರಂ ವಿತರಿಸುತ್ತಿದ್ದು, ಬಂದು ಸ್ವೀಕರಿಸಬಹುದು ಎಂದು ಕೆಪಿಸಿಸಿ ಅಧ್ಯಕ್ಷರು ಅಂಬರೀಷ್​ಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಆಗ ಮಾತು ಮುಂದುವರಿದು, ಟಿಕೆಟ್ ಬೇಕೆಂದು ನಾನು ಅರ್ಜಿ ಹಾಕಿಲ್ಲವಲ್ಲ, ನಾನು ಬಿ ಫಾರಂ ಪಡೆದುಕೊಳ್ಳಲು ಯಾವತ್ತು ಬಂದಿದ್ದೇನೆ ಎಂದು ಅಂಬರೀಷ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪರಮೇಶ್ವರ್ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲಿಸಿ. ಇಲ್ಲವಾದರೆ ಜೆಡಿಎಸ್ ಜತೆ ಸಮ್ಮಿಶ್ರ ಸರ್ಕಾರ ಮಾಡಿ ಗುದ್ದಾಡಬೇಕಾಗುತ್ತದೆ ಎಂದು ನಗುತ್ತಲೇ ಸಲಹೆ ನೀಡಿದರು. ಅಂತಿಮವಾಗಿ, ನಾನು ಟಿಕೆಟ್ ಕೇಳದೇ ಇದ್ದೂ ಅಭ್ಯರ್ಥಿಯಾಗಿ ಘೋಷಿಸಿದ್ದೀರಿ, ತುಂಬಾ ಸಂತೋಷ ಎಂದ ಅಂಬರೀಷ್, ಬಿ ಫಾರಂ ಅನ್ನು ನನ್ನ ಮನೆಗೆ ಕಳಿಸಿ ಎಂದು ಕೋರಿದರು. ‘ನಿಮ್ಮ ಮನೆಗೆ ಕಳಿಸದೇ ಇನ್ಯಾರ ಮನೆಗೆ ಕಳಿಸೋಣ’ ಎಂದು ಪರಮೇಶ್ವರ್ ಸಹ ನಗುತ್ತಲೇ ಅಂಬರೀಷ್ ಸ್ಪರ್ಧೆ ಖಚಿತಪಡಿಸಿಕೊಂಡಿದ್ದಾರೆ.

ಮಲ್ಲೇಶ್ವರ ವಿಚಾರದಲ್ಲಿ ಕಾಂಗ್ರೆಸ್ಸೇ ಸುಸ್ತು!

ರಾಜ್ಯದ 218 ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಕಾಂಗ್ರೆಸ್​ಗೆ ಬೆಂಗಳೂರಿನ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವಿಚಿತ್ರ ಸವಾಲು ಎದುರಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ತಮಗೆ ಟಿಕೆಟ್ ಕೊಟ್ಟಿಲ್ಲ ಎಂದು ವರಾತ ತೆಗೆದು ಆಕಾಂಕ್ಷಿಗಳು ಬೀದಿಗಿಳಿದರೆ, ಮಲ್ಲೇಶ್ವರದಲ್ಲಿ ಪಕ್ಷ ಟಿಕೆಟ್ ಘೋಷಿಸಿದ ಅಭ್ಯರ್ಥಿ ತಾವು ಚುನಾವಣೆಗೆ ಸ್ಪರ್ಧಿಸಲ್ಲ ಎನ್ನುತ್ತಿದ್ದಾರೆ! ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸಂರ್ಪಸಿರುವ ಸಚಿವ ಎಂ.ಆರ್.ಸೀತಾರಾಂ, ತಾವು ಚುನಾವಣೆಗೆ ನಿಲ್ಲುವುದಿಲ್ಲ, ನನ್ನ ಹೆಸರು ಏಕೆ ಪ್ರಸ್ತಾಪವಾಯಿತೆಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ. ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಮಗನೂ ಸ್ಪರ್ಧಿಸುವುದಿಲ್ಲ. ಟಿಕೆಟ್​ಗಾಗಿ ಅರ್ಜಿಯನ್ನೂ ಹಾಕಿಲ್ಲ ಎಂದು ತಿಂಗಳ ಹಿಂದೆಯೇ ಸೀತಾರಾಂ ಮಾಧ್ಯಮದೆದುರು ಸ್ಪಷ್ಟಪಡಿಸಿದ್ದರು. ಸೀತಾರಾಂ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಮಲ್ಲೇಶ್ವರಂ ಆಕಾಂಕ್ಷಿಯಾಗಿದ್ದ ಶ್ರೀಪಾದರೇಣು ಮತ್ತೆ ಟಿಕೆಟ್​ಗಾಗಿ ಪಟ್ಟು ಹಿಡಿದಿದ್ದಾರೆ. ಸೀತಾರಾಂಗೆ ಟಿಕೆಟ್ ನೀಡಲು ತಕರಾರಿಲ್ಲ. ಆದರೆ ಅವರ ಬೆಂಬಲಿಗರಿಗೆ ಟಿಕೆಟ್ ನೀಡಬೇಡಿ ಎಂದು ಮಲ್ಲೇಶ್ವರಂ ಬ್ಲಾಕ್ ಕಾಂಗ್ರೆಸ್ ಒತ್ತಾಯಿಸಿದೆ. ಈ ನಡುವೆ, ಸರ್ವೆಯಲ್ಲಿ ನಿಮ್ಮ ಹೆಸರು ಪ್ರಸ್ತಾಪವಾಗಿದ್ದು ನೀವೇ ಕಣಕ್ಕಿಳಿಯೇಕೆಂದು ಸಿಎಂ ಸಿದ್ದರಾಮಯ್ಯ ಸೀತಾರಾಂ ಮನವೊಲಿಸುತ್ತಿದ್ದಾರೆಂಬ ಮಾಹಿತಿಯೂ ಇದೆ.

ಕೋರ್ಟ್ ಮೆಟ್ಟಿಲೇರಲಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ!

ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಈಗ ಪಕ್ಷದ ನಾಯಕರ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿ ಹಾಕುವುದಿಲ್ಲ ಎಂದ ಮೇಲೆ ಟಿಕೆಟ್ ಆಕಾಂಕ್ಷಿಗಳಿಂದ ಏಕೆ ಅರ್ಜಿ ಆಹ್ವಾನಿಸಿದಿರಿ? ಕಟ್ಟಡ ನಿಧಿ ಎಂದು ಏಕೆ ಹಣ ಪಡೆದಿರಿ? ಎಂಬುದು ಪಕ್ಷದ ನಾಯಕರಿಗೆ ಟಿಕೆಟ್ ಆಕಾಂಕ್ಷಿ ಆನಂದ್ ಅವರ ನೇರ ಪ್ರಶ್ನೆ. ಈ ಕ್ಷೇತ್ರದಲ್ಲಿ ರೈತ ಸಂಘದ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಅವರನ್ನು ಬೆಂಬಲಿಸಲು ಸಿಎಂ ಆಸಕ್ತಿ ತೋರಿಸಿದ್ದಾರೆ. ಇದು ಅವರ ವೈಯಕ್ತಿಕ ಸ್ವಾರ್ಥ ಎಂದು ಟೀಕಿಸಿರುವ ಆನಂದ್, ಮಾ.22ರೊಳಗೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸದಿದ್ದರೆ 23ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ವಿರುದ್ಧ ಕಣಕ್ಕಿಳಿಯುವುದಾಗಿ ಮತ್ತು ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.

ಫೇಸ್​ಬುಕ್ ಸ್ಟೇಟಸ್ ತಂದ ಸಮಸ್ಯೆ

ಸುಪ್ರೀಂಕೋರ್ಟ್ ವಕೀಲ ಹಾಗೂ ಪಕ್ಷದ ವಕ್ತಾರ ಬ್ರಿಜೇಶ್ ಕಾಳಪ್ಪ ತಮ್ಮ ಫೇಸ್​ಬುಕ್​ನಲ್ಲಿ ನಾನು ಚೋಕ್ಸಿ ಪರ ವಾದ ಮಾಡಿಲ್ಲ, ನನಗೆ ಗ್ರಾಮ ಪಂಚಾಯಿತಿ ಟಿಕೆಟ್ ಆದರೂ ನೀಡಿ ಎಂದು ಬರೆದುಕೊಂಡಿದ್ದರು. ಪ್ರತಿಪಕ್ಷಗಳು ಇದನ್ನೇ ಕಾಂಗ್ರೆಸ್ ನೀರವ್ ಮೋದಿ ಪರವಾಗಿದೆ ಎಂದು ಟೀಕಿಸಿದ್ದವು. ಇದರಿಂದಾಗಿ ವಕೀಲ ಚಂದ್ರಮೌಳಿ ಅವರಿಗೆ ಟಿಕೆಟ್ ಘೋಷಣೆಯಾಗಿದ್ದರೂ ಬಿ ಫಾರಂ ತಡೆ ಹಿಡಿಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಚಂದ್ರಮೌಳಿ ಅವರು ತಾವು ಚೋಕ್ಸಿ ಪ್ರಕರಣದಲ್ಲಿ ವಾದಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಬಂಡಾಯ ಸೋಂಕು ಶಮನಕ್ಕೆ ಹರಸಾಹಸ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿರುವಾಗಲೇ ಎರಡು ರಾಷ್ಟ್ರೀಯ ಪಕ್ಷಗಳು ಬಂಡಾಯ ಎದುರಿಸುತ್ತಿದ್ದು, ಅದನ್ನು ಉಪಶಮನ ಮಾಡಲು ಹರಸಾಹಸ ಪಡುತ್ತಿವೆ. ಎರಡೂ ಪಕ್ಷಗಳಲ್ಲಿ ಹತ್ತಾರು ವರ್ಷ ದುಡಿದ ಪಕ್ಷ ನಿಷ್ಠರೇ ಬಂಡಾಯದ ಬಾವುಟ ಹಾರಿಸುತ್ತಿರುವುದು ಎರಡೂ ಪಕ್ಷದ ಮುಖಂಡರಿಗೆ ನುಂಗಲಾರದ ತುತ್ತಾಗಿದೆ.

ಬಿಜೆಪಿಗೆ ಹೋಲಿಸಿದರೆ, ಕಾಂಗ್ರೆಸ್​ನಲ್ಲಿ ಬಂಡಾಯ ಪ್ರಮಾಣ ಕಡಿಮೆಯಿದ್ದು, ಇರುವ ಬಂಡಾಯವನ್ನು ತಗ್ಗಿಸುವ ಪ್ರಯತ್ನ ಬಹುತೇಕ ಯಶಸ್ವಿಯಾಗಿದೆ. ಪಕ್ಷದ ಉಪಾಧ್ಯಕ್ಷರ ಮಾಹಿತಿಯಂತೆ 16 ಕಡೆ ಬಂಡಾಯ ಇದ್ದು, ಈ ಪೈಕಿ 14 ಕಡೆ ಬಂಡಾಯ ಶಮನ ಮಾಡಲಾಗಿದೆ. ನಿರಂತರ ಮಾತುಕತೆ ಮೂಲಕ ಪಕ್ಷದ ಮುಖಂಡರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಹೈಕಮಾಂಡ್ ಬಂಡಾಯ ಶಮನಗೊಳಿಸುವ ಜವಾಬ್ದಾರಿ ನೀಡಿದ್ದು, ಇವರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಗಮನಿಸುವಂತೆ ಸೂಚಿಸಲಾಗಿತ್ತು.

ಕಾಂಗ್ರೆಸ್ ಪಾಲಿಗೆ ಬಂಡಾಯ ಮಾಡುತ್ತಿರುವ ಪ್ರಭಾವಿಗಳನ್ನು ಜೆಡಿಎಸ್ ತನ್ನತ್ತ ಸೆಳೆದುಕೊಳ್ಳುತ್ತಿದೆ. ಕೆಲವರು ಖುದ್ದಾಗಿ ಜೆಡಿಎಸ್ ಬಾಗಿಲು ತಟ್ಟುತ್ತಿದ್ದಾರೆ. ಇದೇ ವೇಳೆ ತಾವು ಸ್ಪರ್ಧಿಸಲು ಉದ್ದೇಶಿಸಿದ್ದ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಪ್ರಭಾವಿ ಅಭ್ಯರ್ಥಿ ಇದ್ದಲ್ಲಿ ಅವಕಾಶ ಸಿಗದೇ ಬಂಡಾಯವಾಗಿ ಕಣಕ್ಕಿಳಿಯುವುದಾಗಿ ಕೆಲವರು ಘೋಷಿಸಿದ್ದರು. ಇನ್ನು ಬಿಜೆಪಿ ತಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿಯೇ ಬಂಡಾಯ ಎದುರಿಸುತ್ತಿದೆ. ಈ ಬಗ್ಗೆ ಆ ಪಕ್ಷದ ಮುಖಂಡರು ಮಾತ್ರ ಈ ವಿಚಾರವನ್ನು ಧನಾತ್ಮಕವಾಗಿ ತೆಗೆದುಕೊಂಡಿದ್ದು, ಜನಾದೇಶ ನಮ್ಮ ಪರವಾಗಿ ಬರುತ್ತದೆ ಎಂಬುದಕ್ಕೆ ಈ ಬೆಳವಣಿಗೆ ತೋರಿಸುತ್ತಿದೆ.

 

Leave a Reply

Your email address will not be published. Required fields are marked *