ವಿಧಾನಸಭೆ ಟಿಕೆಟ್​ಗಾಗಿ ​ರಾಹುಲ್​ ಮನೆ ಎದುರು ಪ್ರತಿಭಟನೆ ಕುಳಿತ ದಂಪತಿ

ನವದೆಹಲಿ: ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​ ನೀಡದ ಕಾಂಗ್ರೆಸ್​ ನಡೆಯಿಂದ ನೊಂದ ಹೈದರಾಬಾದ್​ನ ಮಾಜಿ ಮೇಯರ್​ ಕಾರ್ತಿಕಾ ರೆಡ್ಡಿ ಅವರು ತಮ್ಮ ಪತಿ ಚಂದ್ರ ರೆಡ್ಡಿ ಅವರೊಂದಿಗೆ ದೆಹಲಿಗೆ ತೆರಳಿ ರಾಹುಲ್​ ಗಾಂಧಿ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಟಿಕೆಟ್​ ಆಕಾಂಕ್ಷಿ ಕಾರ್ತಿಕಾ ರೆಡ್ಡಿ, ” ನಾನು ನನ್ನ ಪತಿ ಕಾಂಗ್ರೆಸ್​ಗಾಗಿ ದುಡಿದಿದ್ದೇವೆ. ಸಿಕಂದರಾಬಾದ್​ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷವನ್ನು ಸಂಘಟಿಸಲು ಶ್ರಮಿಸಿದ್ದೇವೆ. ನನ್ನ ಪತಿ ಎನ್​ಎಸ್​ಯುಐನಿಂದ ಬಂದವರು. ನಾವು ಸಂಘಟನೆ ಮಾಡಿದ್ದ ವಾರ್ಡ್​ ಮಹಿಳಾ ಮೀಸಲಾದ ನಂತರ ಅಲ್ಲಿಂದ ನಾನು ಸ್ಪರ್ಧಿಸಿ ಗೆದ್ದಿದ್ದೆ. ಪಕ್ಷ ನನಗೆ ಮೇಯರ್​ ಆಗುವ ಅವಕಾಶವನ್ನೂ ನೀಡಿತ್ತು. 2014ರಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್​ ನಿರಾಕರಿಸಲಾಗಿತ್ತು. ವಿಧಾನ ಪರಿಷತ್​ಗೆ ನೇಮಿಸುವ ಭರವಸೆಯನ್ನೂ ನೀಡಲಾಗಿತ್ತು. ಆದರೆ, ಅದ್ಯಾವುದನ್ನೂ ನೆರವೇರಿಲ್ಲ, “ಎಂದು ಅಲವತ್ತುಕೊಂಡಿದ್ದಾರೆ.

“ಈಗಿನ ಚುನಾವಣೆಗೆ ಸಮೀಕ್ಷೆ ಆಧಾರದಲ್ಲಿ ಟಿಕೆಟ್ ನೀಡಲಾಗುವುದು ಎಂದು ಪಕ್ಷ ಹೇಳಿದೆ. ಅದಕ್ಕೆ ನಾನೂ ಸಿದ್ಧಳಿದ್ದೇನೆ. ಆದರೆ, ಅಭ್ಯರ್ಥಿಗಳ ಪಟ್ಟಿಯಲ್ಲಿ ಈಗ ನನ್ನ ಹೆಸರಿಲ್ಲ. ಆದ್ದರಿಂದ ರಾಹುಲ್​ ಅವರನ್ನು ನೇರವಾಗಿ ಭೇಟಿಯಾಗಿ ನ್ಯಾಯ ಕೇಳಲು ಇಲ್ಲಿಗೆ ಬಂದಿದ್ದೇನೆ. ಆದರೆ, ಹೊರಗಿನಿಂದ ಬಂದವರಿಗೆ ಟಿಕೆಟ್​ ನೀಡಿರುವುದಾಗಿ ಈಗ ಗೊತ್ತಾಗಿದೆ. ನನಗೆ ಏಕೆ ಅವಕಾಶ ನೀಡುತ್ತಿಲ್ಲವೋ ನನಗೆ ಗೊತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಹುಲ್​ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದ ದಂಪತಿಯನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್​ 75 ಅಭ್ಯರ್ಥಿಗಳ ಪಟ್ಟಿಯನ್ನು ಈವರೆಗೆ ಬಿಡುಗಡೆ ಮಾಡಿದ್ದು, ಅದರಲ್ಲಿ ಕಾರ್ತಿಕಾ ರೆಡ್ಡಿ ಅವರ ಹೆಸರಿಲ್ಲ.

Banda Karthika Reddy