ದಲಿತ ವ್ಯಕ್ತಿಯ ಶವವನ್ನು ತಮ್ಮ ಹೊಲಗಳ ಮೂಲಕ ಕೊಂಡೊಯ್ಯಲು ಸವರ್ಣೀಯರು ನಿರಾಕರಿಸಿದ್ದಕ್ಕೆ ಇವರು ಏನು ಮಾಡಿದರು ಗೊತ್ತಾ?

ಚೆನ್ನೈ: ಅದೆಂಥದ್ದೇ ರಾಗ ದ್ವೇಷವಿದ್ದರೂ, ಜಾತಿ ತಾರತಮ್ಯಗಳಿದ್ದರೂ ಸಾವಿನಲ್ಲಿ ಎಲ್ಲವೂ ಮುಕ್ತಾಯವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ತಮಿಳುನಾಡಿನ ವಾಣಿಯಂಬಾಡಿ ಪಟ್ಟಣದ ಈ ದಲಿತನ ವಿಷಯದಲ್ಲಿ ಅದು ಹಾಗಾಗಿಲ್ಲ. ಸತ್ತವನು ದಲಿತ ಎಂಬ ಕಾರಣಕ್ಕಾಗಿ ಈ ಪಟ್ಟಣದ ಸವರ್ಣೀಯರು ಆತನ ಶವವನ್ನು ತಮ್ಮ ಗದ್ದೆಗಳ ಮೂಲಕ ಹಾದು ಸ್ಮಶಾನಕ್ಕೆ ಕೊಂಡೊಯ್ಯಲು ಅವಕಾಶ ನಿರಾಕರಿಸಿದ್ದಾರೆ. ಹೀಗಾಗಿ, ಎತ್ತರದ ಸೇತುವೆ ಮೇಲಿಂದ ಶವವನ್ನು ಕೆಳಗಿಳಿಸಿ ಕಷ್ಟಪಟ್ಟು ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ದಲಿತರ ಈ ಸಾಹಸವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್​ ಆಗಿದೆ.

ಕಳೆದ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಾಣಿಯಂಬಾಡಿ ನಿವಾಸಿ ಕುಪ್ಪನ್​ (50) ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಪೊಲೀಸರು ಶನಿವಾರ ಶವವನ್ನು ಸಂಬಂಧಿಕರ ವಶಕ್ಕೆ ಒಪ್ಪಿಸಿದ್ದರು. ಭಾನುವಾರ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿತ್ತು. ಅದರಂತೆ ಶವವನ್ನು ವಾಣಿಯಂಬಾಡಿಯ ಪಾಲಾರ್​ ನದಿ ತಟದಲ್ಲಿರುವ ಸ್ಮಶಾನಕ್ಕೆ ಕೊಂಡೊಯ್ಯಲಾಗುತ್ತಿತ್ತು.

ಇದು ಇಂದಿನ ಮಾತಲ್ಲ
ವಾಣಿಯಂಬಾಡಿ ಸವರ್ಣೀಯರು ದಲಿತರ ಶವಗಳನ್ನು ತಮ್ಮ ಹೊಲದ ಮೂಲಕ ಕೊಂಡೊಯ್ಯಲು ಅವಕಾಶ ನಿರಾಕರಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಹೀಗೆ ಮಾಡಲಾಗುತ್ತಿದೆ. ಹಾಗಾಗಿ ದಲಿತರು ಮೃತಪಟ್ಟಾಗ ಅವರ ಶವವನ್ನು ಎತ್ತರದ ಸೇತುವೆ ಮೇಲಿಂದ ಕೆಳಗಿಳಿಸಿ ಅಂತ್ಯಸಂಸ್ಕಾರ ನೆರವೇರಿಸುವುದು ಅನಿವಾರ್ಯವಾಗಿದೆ ಎಂದು ದಲಿತ ಸಮುದಾಯದವರು ದೂರಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಪ್ರಕರಣದ ತನಿಖೆಗೆ ಆದೇಶಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *