ಡೆಂಘೆ ಸಂಹಾರಕ್ಕೆ ಜಿಲ್ಲಾಡಳಿತ ಪಣ

ಮಂಗಳೂರು: ಡೆಂಘೆ ಜ್ವರ ನಿಯಂತ್ರಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದ ಅಧಿಕಾರಿಯನ್ನು ಅಮಾನತುಗೊಳಿಸಲು ಆದೇಶಿಸಿದ್ದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಈಗ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಸ್ವತಃ ಅವರೇ ವಿಶೇಷ ಕಾಳಜಿ ವಹಿಸಿ, ಸೊಳ್ಳೆ ತಾಣಗಳ ನಾಶ ಕುರಿತಂತೆ ಸರಣಿ ಸಭೆಗಳನ್ನು ನಡೆಸಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.
ಭಾನುವಾರ ಸಾಯಂಕಾಲ ತಮ್ಮ ಕಚೇರಿಯಲ್ಲಿ ಡೆಂಘೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಕೈಗೊಂಡ ಕಾರ್ಯಗಳ ಪರಿಶೀಲನೆ ನಡೆಸಿದರು. ನಗರದಲ್ಲಿ ಎಲ್ಲ ಮನೆ, ಅಂಗಡಿ, ಉದ್ದಿಮೆ ಸಂಸ್ಥೆ, ಮಾರುಕಟ್ಟೆ, ಅಪಾರ್ಟ್‌ಮೆಂಟ್, ಫ್ಲಾೃಟ್, ಸರ್ಕಾರಿ ಕಟ್ಟಡ, ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ತಪಾಸಣೆ ನಡೆಸಬೇಕು. ನೀರು ನಿಂತು ಸೊಳ್ಳೆ ಉತ್ಪತ್ತಿಯಾಗಿರುವುದು ಕಂಡುಬಂದರೆ ಅಂತಹ ವ್ಯಕ್ತಿಗಳಿಗೆ ಸ್ಥಳದಲ್ಲಿಯೇ ದೊಡ್ಡ ಮೊತ್ತದ ದಂಡ ವಿಧಿಸಿ ವಸೂಲಿ ಮಾಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರತಿದಿನ ವರದಿ: ಜಿಲ್ಲೆಯಲ್ಲಿ ಡೆಂಘೆ, ಮಲೇರಿಯಾ ನಿಯಂತ್ರಣಕ್ಕಾಗಿ ಹಿರಿಯ ಅಧಿಕಾರಿಗಳ ನೇತೃತ್ವದ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಶಕ್ತಿಮೀರಿ ರೋಗ ನಿಯಂತ್ರಣಕ್ಕೆ ಶ್ರಮಿಸಿ ಪ್ರತಿದಿನ ಸಂಜೆ 7 ಗಂಟೆಗೆ ಆಯಾ ದಿನದ ಪ್ರಗತಿಯ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಐಎಎಸ್ (ಪ್ರೊಬೆಷನರಿ) ಅಧಿಕಾರಿ ರಾಹುಲ್ ಶಿಂಧೆ ಮತ್ತು ಮನಪಾ ಜಂಟಿ ಆಯುಕ್ತೆ ಗಾಯತ್ರಿ ನಾಯಕ್ ನೇತೃತ್ವದಲ್ಲಿ ಯೋಜನೆ ಮತ್ತು ದತ್ತಾಂಶ ಸಂಗ್ರಹ. ಹೆಚ್ಚಿನ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ರೋಗಬಾಧಿತ ಮನೆಗಳನ್ನು ಪತ್ತೆ ಮಾಡಿ ಪ್ರತಿದಿನ 7 ಗಂಟೆಗೆ ವರದಿ ನೀಡಬೇಕು.
ಡಿಎಚ್‌ಒ ಡಾ.ರಾಮಕೃಷ್ಣ ರಾವ್ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ನವೀನ್ ಕುಲಾಲ್ ನೇತೃತ್ವದ ತಂಡ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವುದು. ಮನಪಾ ಜಂಟಿ ಆಯುಕ್ತೆ ಗಾಯತ್ರಿ ನಾಯಕ್, ವಾರ್ತಾಧಿಕಾರಿ ಖಾದರ್ ಶಾ, ಲೇಡಿಗೋಶನ್ ಆಸ್ಪತ್ರೆಯ ಆರ್‌ಎಂಒ ಡಾ.ದುರ್ಗಾ ಪ್ರಸಾದ್ ನೇತೃತ್ವದಲ್ಲಿ ರೋಗ ತಡೆಗಟ್ಟುವಿಕೆ ಕುರಿತು ವ್ಯಾಪಕ ಪ್ರಚಾರ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು. ಮನಪಾ ಆಯುಕ್ತ ಮೊಹಮ್ಮದ್ ನಝೀರ್ ಹಾಗೂ ಪರಿಸರ ಅಧಿಕಾರಿ ಮಧು ಮನೋಹರ್ ನೇತೃತ್ವದಲ್ಲಿ ಸ್ವಚ್ಛತೆ ಬಗ್ಗೆ ವಿಶೇಷ ಗಮನಹರಿಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವುದು ಹಾಗೂ ಫಾಗಿಂಗ್ ಜವಾಬ್ದಾರಿ ನೀಡಲಾಗಿದೆ.

ಇಂಜಿನಿಯರಿಂಗ್ ವಿಭಾಗದ ಜವಾಬ್ದಾರಿ: ಮಳೆ ನೀರು ಹರಿಯುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವುದು. ಆರೋಗ್ಯ ಮತ್ತು ಇಂಜಿನಿಯರಿಂಗ್ ವಿಭಾಗದ ಸಿಬ್ಬಂದಿ ಪರಸ್ಪರ ಸಹಕರಿಸಿಕೊಂಡು ಕೃತಕ ನೆರೆ ಉಂಟಾಗುವ ಪ್ರದೇಶಗಳನ್ನು ಗುರುತಿಸಿಕೊಂಡು ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕು.

ಒಳಚರಂಡಿ ವಿಭಾಗ: ನಗರದಲ್ಲಿ ಭೂಗತ ಒಳಚರಂಡಿ ನೀರು ರಸ್ತೆಗಳಲ್ಲಿ ಮತ್ತು ಚರಂಡಿಗಳಲ್ಲಿ ಹರಿಯುತ್ತಿದೆ. ಇದಕ್ಕೆ ಒಳಚರಂಡಿಗಳಿಗೆ ಮಳೆ ನೀರು ಸೇರುತ್ತಿರುವುದು ಕಾರಣವಾಗಿದೆ. ಆದ್ದರಿಂದ ಭೂಗತ ಒಳಚರಂಡಿಗೆ ಮಳೆ ನೀರು ಬಿಡುವವರಿಗೆ ಸ್ಥಳದಲ್ಲೇ ದಂಡ ವಿಧಿಸಿ ಸಂಪರ್ಕ ತಪ್ಪಿಸಲು ಸೂಚಿಸಲಾಗಿದೆ.

ನಗರ ಯೋಜನೆ ವಿಭಾಗ: ನಗರದ ಕಟ್ಟಡ, ತೆರೆದ ಪ್ರದೇಶ, ವಾಣಿಜ್ಯ ಕಟ್ಟಡ ನಿರ್ಮಾಣ ಹಂತದ ಕಟ್ಟಡಗಳಿಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡು ಬಂದಲ್ಲಿ ಸ್ಥಳದಲ್ಲೇ ಅಧಿಕ ಮೊತ್ತದ ದಂಡ ವಿಧಿಸಿ ಕಟ್ಟಡ ನಿರ್ಮಾಣ ಪರವಾನಗಿಯನ್ನು ಅಮಾನತ್ತಿಡಲು ಸೂಚನೆ ನೀಡಲಾಗಿದೆ.

72 ಕೇಂದ್ರ ನಾಶ, 85 ಸಾವಿರ ರೂ. ದಂಡ
ಮಂಗಳೂರು ನಗರ ವ್ಯಾಪ್ತಿಯಲ್ಲಿ ಸೊಳ್ಳೆ ಉತ್ಪಾದನಾ ಸ್ಥಳಗಳ ಮೇಲೆ ದಾಳಿ ಮುಂದುವರಿದಿದೆ.
ಭಾನುವಾರ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಆಶ್ರಯದಲ್ಲಿ ಬೃಹತ್ ಆಂದೋಲನ ನಡೆಯಿತು. ಡೆಂೆ ವ್ಯಾಪಕವಾಗಿ ಕಂಡುಬಂದಿರುವ ಗುಜ್ಜರಕೆರೆ, ಬೋಳಾರ, ಎಮ್ಮೆಕೆರೆ, ಮಹಾಕಾಳಿಪಡ್ಪು, ಮಂಗಳಾದೇವಿ ಪ್ರದೇಶಗಳನ್ನು ಗ್ರಿಡ್ 1 ಎಂದು ಪರಿಗಣಿಸಿ ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಲಾಯಿತು. 250ಕ್ಕೂ ಅಧಿಕ ಸಿಬ್ಬಂದಿ, ಸ್ವಯಂಸೇವಕರು, ಅಧಿಕಾರಿಗಳು ಭಾಗವಹಿಸಿದ್ದರು. ಹಲವು ದಿನಗಳಿಂದ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾದವರಿಗೆ ಸ್ಥಳದಲ್ಲೇ ದಂಡ ವಿಧಿಸಲಾಯಿತು.
ಜೆಪ್ಪು ಆರೋಗ್ಯ ಕೇಂದ್ರ, ಮಂಗಳಾದೇವಿ ದೇವಸ್ಥಾನ ಆಸುಪಾಸು, ಬೋಳಾರ ಶಾಲೆ, ಬಿಇಒ ಕಚೇರಿ, ಜೆಪ್ಪು ಸೆಮಿನರಿ, ಭಗಿನಿ ಸಮಾಜ, ಮಂಗಳೂರು ಕ್ಲಬ್ ಪರಿಸರದಲ್ಲಿರುವ ವಿವಿಧ ಕಟ್ಟಡಗಳನ್ನು ಭೇಟಿ ಮಾಡಿದ ಮನಪಾ ತಂಡದವರು ಒಟ್ಟು 72 ಸೊಳ್ಳೆ ಉತ್ಪಾದನಾ ತಾಣಗಳನ್ನು ತೆರವುಗೊಳಿಸಿದ್ದಾರೆ. ಸರ್ಕಾರಿ ಕಚೇರಿ ಕಟ್ಟಡಗಳು, ಖಾಸಗಿ ಎರಡನ್ನೂ ಕೇಂದ್ರೀಕರಿಸಿ ತಪಾಸಣೆ ಕಾರ್ಯ ನಡೆಸಲಾಗುತ್ತಿದೆ. ಸೊಳ್ಳೆ ಉತ್ಪಾದನಾ ತಾಣಗಳ ಮಾಲೀಕರಿಂದ ಒಟ್ಟಾರೆಯಾಗಿ 85 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ಬೃಹತ್ ಕಟ್ಟಡಗಳಿಗೆ 15ರಿಂದ 20 ಸಾವಿರ ರೂ.ವರೆಗೆ ದಂಡ ವಿಧಿಸಲಾಗಿದೆ.

ಬೋಳಾರ ಫೆರಿ ರಸ್ತೆಯಲ್ಲಿನ ಐಸ್ ಪ್ಲಾಂಟ್ ಕಟ್ಟಡದ ಕೆಲವು ಭಾಗಗಳಲ್ಲಿ ನೀರು ನಿಂತು ಸೊಳ್ಳೆಗಳು ಹುಟ್ಟಿಕೊಳ್ಳುವ ಸ್ಥಿತಿ ಇತ್ತು. ಬೋಳಾರ ಎಮ್ಮೆಕೆರೆ ಭಾಗದಲ್ಲಿನ ಮನೆಯೊಂದರ ತಾರಸಿಯಲ್ಲಿ ನೀರು ನಿಂತು ಸೊಳ್ಳೆ ಲಾರ್ವಗಳನ್ನು ಹೊಂದಿತ್ತು. ಇದರಿಂದ ಸೊಳ್ಳೆ ಮೂಲಕ ಹರಡುವ ರೋಗಗಳು ಹೆಚ್ಚುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ, ಎಚ್ಚರಿಕೆ ವಿಧಿಸುವ ಉದ್ದೇಶದಿಂದ ಪಾಲಿಕೆ ಕಾರ್ಯಾಚರಣೆ ನಡೆಸುತ್ತಿದೆ.

ಸಂಸದ ನಳಿನ್ ಮಗಳಿಗೂ ಡೆಂಘೆ
ಡೆಂಘೆ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ವಿಐಪಿ ಕುಟುಂಬಗಳ ಸದಸ್ಯರೂ ಸಮಸ್ಯೆಗೆ ಒಳಗಾಗಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಪುತ್ರಿ, ಮಂಗಳೂರು ಕೆನರಾ ಹೈಸ್ಕೂಲ್ ವಿದ್ಯಾರ್ಥಿನಿ ಸಂಸ್ಕೃತಿ ಡೆಂಘೆ ಜ್ವರ ಬಾಧಿತರಾಗಿ ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಆರ್‌ಎಸ್‌ಎಸ್ ಮುಖಂಡ ಸುನೀಲ್ ಆಚಾರ್ ಪುತ್ರ ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ರಾಮಚಂದರ್ ಬೈಕಂಪಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಧಿತರ ಸಂಖ್ಯೆ 452ಕ್ಕೇರಿಕೆ:
ದ.ಕ. ಜಿಲ್ಲೆಯಲ್ಲಿ ಭಾನುವಾರ 26 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದು, ಇವರಲ್ಲಿ 3 ಮಂದಿಯ ಎಲಿಸಾ ಟೆಸ್ಟ್‌ನಲ್ಲಿ ಡೆಂಘೆ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಶಂಕಿತ ಡೆಂಘೆ ಬಾಧಿತರ ಸಂಖ್ಯೆ 452ಕ್ಕೆ ಏರಿಕೆಯಾಗಿದೆ. ಶನಿವಾರ 426 ಮಂದಿಯಲ್ಲಿ ಜಿಲ್ಲೆಯಲ್ಲಿ ಶಂಕಿತ ಡೆಂಘೆ ಜ್ವರ ಪತ್ತೆಯಾಗಿತ್ತು.

ಜ್ವರದಿಂದ ಕಾರ್ಮಿಕ ಸಾವು
ಮಂಗಳೂರು ನಗರದ ತ್ಯಾಜ್ಯ ಸಂಗ್ರಹ ಗುತ್ತಿಗೆ ವಹಿಸಿರುವ ಸಂಸ್ಥೆಯ ಸಿಬ್ಬಂದಿ ಜ್ವರದಿಂದ ಭಾನುವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಟ್ಟಿದ್ದಾರೆ. ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಅವರು ಜ್ವರ ಬಂದು ಮೃತಪಟ್ಟಿದ್ದಾರೆ. ಅದರೆ ಡೆಂಘೆ ಜ್ವರ ಇರುವ ಕುರಿತು ಆಸ್ಪತ್ರೆಯಿಂದ ವರದಿ ಬಂದಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಕುಲಾಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *