More

  T20 WORLDCUP: ಮಾಡು ಇಲ್ಲವೆ ಮಡಿ ಒತ್ತಡದಲ್ಲಿ ಪಾಕ್​; ಇಂದು ಕೆನಡಾ ಸವಾಲು

  ನ್ಯೂಯಾರ್ಕ್​: ಹಾಲಿ ರನ್ನರ್​ಅಪ್​ ಪಾಕಿಸ್ತಾನ ತಂಡ ಟಿ20 ವಿಶ್ವಕಪ್​ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಮುಗ್ಗರಿಸುವ ಮೂಲಕ ಮಾಡು ಇಲ್ಲವೆ ಮಡಿ ಒತ್ತಡಕ್ಕೆ ಸಿಲುಕಿದೆ. ಸೂಪರ್-8 ಹಂತಕ್ಕೇರುವ ಆಸೆ ಜೀವಂತ ಉಳಿಸಿಕೊಳ್ಳಲು ಬಾಬರ್​ ಅಜಮ್​ ಪಡೆ, ಕೆನಡಾ ವಿರುದ್ಧ ಮಂಗಳವಾರ ನಡೆಯಲಿರುವ ತನ್ನ 3ನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಸವಾಲು ಎದುರಿಸುತ್ತಿದೆ.

  ಆತಿಥೇಯ ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ ಸೂಪರ್​ ಓವರ್​ನಲ್ಲಿ ಸೋತಿದ್ದ ಪಾಕ್​, ಸಾಂಪ್ರದಾಯಿಕ ಎದುರಾಳಿ ಭಾರತದ ಎದುರು ಸಾಧಾರಣ ಮೊತ್ತದ ಸವಾಲು ಬೆನ್ನಟ್ಟಲಾಗದೆ ಎಡವಿದೆ. ಇನ್ನೀಗ ಎ ಗುಂಪಿನ ಉಳಿದ 2 ಪಂದ್ಯಗಳಲ್ಲಿ ಭಾರಿ ಅಂತರದಿಂದ ಗೆದ್ದರಷ್ಟೇ ಪಾಕ್​ ಮುಂದಿನ ಹಂತಕ್ಕೇರುವ ಆಸೆ ಉಳಿಸಿಕೊಳ್ಳಬಹುದಾಗಿದೆ.

  ಭಾರತ ವಿರುದ್ಧದ ಪಂದ್ಯದಲ್ಲಿ ಪಾಕ್​ ಬೌಲರ್​ಗಳು ಅಮೋ ನಿರ್ವಹಣೆ ತೋರಿದ್ದರೂ, ಬ್ಯಾಟರ್​ಗಳ ನಿರ್ವಹಣೆ ನೀರಸವೆನಿಸಿದೆ. ಪ್ರಮುಖವಾಗಿ ಖರ್​ ಜಮಾನ್​, ಇಮಾದ್​ ವಾಸಿಂ, ಶಾದಾಬ್​ ಖಾನ್​ ಮತ್ತು ಇಫ್ತಿಕಾರ್​ ಅಹ್ಮದ್​ ಕೆಟ್ಟ ಹೊಡೆತಗಳಿಗೆ ಔಟಾಗಿದ್ದು ಟೀಕೆಗೆ ಗುರಿಯಾಗಿದೆ.

  ಮತ್ತೊಂದೆಡೆ ಕೆನಡಾ ಕೂಡ ಆರಂಭಿಕ ಪಂದ್ಯದಲ್ಲಿ ಅಮೆರಿಕ ಎದುರು ಸೋತಿದ್ದರೂ, ಐರ್ಲೆಂಡ್​ ಎದುರು 12 ರನ್​ಗಳಿಂದ ಗೆದ್ದು ಬೀಗಿತ್ತು. ಹೀಗಾಗಿ ಸದ್ಯ ಎ ಗುಂಪಿನ ಅಂಕಪಟ್ಟಿಯಲ್ಲಿ ಪಾಕ್​ಗಿಂತ ಕೆನಡಾ ತಂಡವೇ ಮೇಲಿನ ಸ್ಥಾನದಲ್ಲಿದೆ. ಭಾರತ-ಪಾಕ್​ ಮೂಲದ ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಕೆನಡಾ ಕೂಡ ಪಾಕ್​ಗೆ ಕಠಿಣ ಸವಾಲೇ ಆಗುವ ಅಪಾಯವಿದೆ.

  ಪಾಕ್​ ಸೂಪರ್​-8 ಲೆಕ್ಕಾಚಾರ…
  ಪಾಕಿಸ್ತಾನದ ಸೂಪರ್​-8 ಪ್ರವೇಶ ಈಗ ಬರೀ ಅದರ ಗೆಲುವನ್ನು ಅವಲಂಭಿಸಿಲ್ಲ. ಜತೆಗೆ ಅಮೆರಿಕದ ಕೊನೇ 2 ಪಂದ್ಯಗಳ ಫಲಿತಾಂಶವೂ ಪಾಕ್​ ಪಾಲಿಗೆ ನಿರ್ಣಾಯಕವೆನಿಸಿದೆ. ಅಮೆರಿಕ ತನ್ನ ಕೊನೇ 2 ಪಂದ್ಯಗಳಲ್ಲಿ ಭಾರತ ಮತ್ತು ಐರ್ಲೆಂಡ್​ ಎದುರು ಆಡಲಿದೆ. ಅಮೆರಿಕ ಇವೆರಡರಲ್ಲಿ ಒಂದರಲ್ಲಿ ಗೆದ್ದರೂ ಪಾಕ್​ ಟೂರ್ನಿಯಿಂದ ಹೊರಬೀಳಲಿದೆ. ಅಮೆರಿಕ ಎರಡರಲ್ಲೂ ಸೋತು, ಪಾಕ್​ ಕೊನೇ ಎರಡೂ ಪಂದ್ಯ ಗೆದ್ದರೆ ಆಗ ರನ್​ರೇಟ್​ ಲೆಕ್ಕಾಚಾರ ನಿರ್ಣಾಯಕ ಪಾತ್ರ ವಹಿಸಲಿದೆ. ಹೀಗಾಗಿ ಪಾಕ್​ ಕೊನೇ 2 ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಗೆದ್ದು ರನ್​ರೇಟ್​ ಕೂಡ ಸುಧಾರಿಸಿಕೊಳ್ಳುವುದು ಅಗತ್ಯವಾಗಿದೆ. ಸದ್ಯಕ್ಕೆ ಪಾಕ್​ (-0.150) ರನ್​ರೇಟ್​ ಕೂಡ ಅಮೆರಿಕಕ್ಕಿಂತ (+0.626) ಕಳಪೆಯಾಗಿದೆ.

  ಭಾರತದ ವಿರುದ್ಧ ಸೋಲುಂಡ ಪಾಕಿಸ್ತಾನಕ್ಕೆ ಸೂಪರ್​ 8 ಹಂತ ತಲುಪಲು ಭಾರತದ ಸಹಾಯವೇ ಬೇಕಿದೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts