ಕೋಲಾರ: ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಅರಿವಿಲ್ಲದ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು. ಒಂದು ಎಕರೆ ಬೆಳೆ ನಷ್ಟಕ್ಕೆ ಕನಿಷ್ಠ ೫೦ ಸಾವಿರ ರೂ. ಕಲ್ಪಿಸಬೇಕು ಎಂದು ಒತ್ತಾಯಿಸಿ, ನಗರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಹೊಸ ಬಸ್ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಎತ್ತಿನ ಬಂಡಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳು ಬಗೆಹರಿಯದೆ ಶಾಶ್ವತವಾಗಿ ಹಾಗೇ ಉಳಿದುಕೊಂಡಿವೆ. ಜನಪ್ರತಿನಿಧಿಗಳಿಗೆ ಜನರ ಸಮಸ್ಯೆಗಳಿಗೆ ಸ್ವ ಹಿತಾಸಕ್ತಿಯೇ ಮುಖ್ಯವಾಗಿದ್ದು, ಇನ್ನು ಜಿಲ್ಲಾ ಉಸ್ತುವಾರಿ ಸಚಿವರಿಗಂತೂ ಜಿಲ್ಲೆಯ ಬಗ್ಗೆ ಅರಿವಿಲ್ಲದಂತಾಗಿದೆ ಎಂದು ಆರೋಪಿಸಿದರು.
ಸುಮಾರು ವರ್ಷಗಳಿಂದ ನಕಲಿ ಬಿತ್ತನೆ ಬೀಜ, ಕೀಟ ನಾಶಕಗಳ ನಿಯಂತ್ರಣವಿಲ್ಲದಂತಾಗಿದೆ. ಬೆಳೆಗಳನ್ನು ಬೆಳೆಯುತ್ತಿರುವ ರೈತರು ಸುಧಾರಿಸಿಕೊಳ್ಳಲಾಗುತ್ತಿಲ್ಲ. ರೈತರ ಸುಧಾರಣೆಗೆ ತಕ್ಕಂತೆ ಯೋಜನೆಗಳನ್ನು ರೂಪಿಸುವಲ್ಲಿ ಸರ್ಕಾರಗಳು ವಿಫಲವಾಗಿದ್ದು, ಕಂಪನಿಗಳಿಗೆ ಉತ್ತೇಜನ ನೀಡುತ್ತಿರುವುದು ಸರಿಯಲ್ಲ ಎಂದು ದೂರಿದರು.
ಸಂಘದ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆ ಕೋಲಾರ ಎಂದರೆ ಅತ್ತೆ ಮನೆಯಲ್ಲಿ 3 ದಿನ, ಸ್ವಂತ ಮನೆಯಲ್ಲಿ 3 ದಿನ ಎಂಬ ಗಾದೆಯಂತಾಗಿದೆ. ರಾಜ್ಯ ಸರ್ಕಾರವು ಹಗರಣಗಳಲ್ಲಿ ತೆಲಾಡುತ್ತಿದ್ದು, ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ, ರೈತರ, ಕೂಲಿಕಾರ್ಮಿಕರ ಕೆಲಸಕ್ಕೆ ಸ್ಪಂದನೆ ದೊರೆಯುತ್ತಿಲ್ಲ, ಕೂಲಿ ಬಿಟ್ಟು ತಿಂಗಳಾನುಗಟ್ಟಲೆ ಅಲೆದಾಡಿದರೂ ಕನಿಷ್ಠ ಅಽಕಾರಿಗಳ ನೆರಳು ಸಹ ರೈತರಿಗೆ ಕಾಣಿಸುವುದಿಲ್ಲ, ದಲ್ಲಾಳಿಗಳ ಮೂಲಕ ಲಂಚ ಕೊಟ್ಟರೆ ಮಾತ್ರ ಅಧಿಕಾರಿಗಳ ದರ್ಶನವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಇಲ್ಲ, ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯ ಡಿಎಸ್ ಸೇರಿದಂತೆ ಶೇ.50ರಷ್ಟು ಉದ್ಯೋಗ ಖಾಲಿಯಿವೆ, ಇದರಿಂದಾಗಿ ಜಿಲ್ಲೆಯ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹುಡುಕಿಕೊಟ್ಟರೆ ಉಚಿತ ಟೊಮ್ಯಾಟೊ ವಿತರಣೆ
ನಾಪತ್ತೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿಕೊಟ್ಟರೆ ರಾಜ್ಯದ ಎಲ್ಲ ಶಾಸಕರಿಗೂ ವಿಧಾನಸೌಧದ ಮುಂದೆ ಕೆ.ಸಿ ವ್ಯಾಲಿ ನೀರು ಹಾಗೂ ಟೊಮ್ಯಾಟೊ ಉಚಿತವಾಗಿ ನೀಡಲಾಗುವುದು ಎಂದು ಎ.ನಳಿನಿ ಗೌಡ ಘೊಷಿಸಿದರು. ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸಂಘಗಳಿಗೆ ನೀಡಲಾಗುತ್ತಿದ್ದ ಸಾಲ ಸೌಲಭ್ಯ ಸ್ಥಗಿತಗೊಳಿಸಲಾಗಿದ್ದು, ಮಹಿಳೆಯರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಬ್ಯಾಂಕಿಗೆ ಆಡಳಿತಾಧಿಕಾರಿ ನಾಮ್ಕಾವಸ್ತೆಗೆ ನೇಮಕವಾಗಿದ್ದಾರೆ. ಬಡವರಿಗೆ ಸೌಲಭ್ಯ ಕಲ್ಪಿಸುವಲ್ಲಿ ವಿಫರಾಗಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಽಕಾರಿಗಳಾದ ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ಫಾರುಕ್‌ಪಾಷಾ, ರಾಜೇಶ್, ಚಂದ್ರಪ್ಪ, ಯಲ್ಲಪ್ಪ, ಆಂಜಿನಪ್ಪ, ಹರೀಶ್, ಸುಪ್ರೀಂಚಲ, ಶಶಿ, ಮುನಿರಾಜು, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ಅನಿಲ್, ರಾಮಸಾಗರ ವೇಣು, ಬಾಬು, ಅಪ್ಪೋಜಿರಾವ್, ಮುನಿಕೃಷ್ಣ, ಶೈಲಜಾ, ನಾಗರತ್ನಾ, ಮುನಿಯಮ್ಮ, ಶೋಭಾ, ರಾಧಾ, ಚೌಡಮ್ಮ ಇದ್ದರು.