ಚಿಕ್ಕಮಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಬಲಗೊಳ್ಳುವ ದಿಸೆಯಲ್ಲಿ ಕಡ್ಡಾಯ ಮತದಾನ ವ್ಯವಸ್ಥೆ ಜಾರಿಗೆ ಬರಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಉಮೇಶ್ ಎಂ.ಅಡಿಗ ಆಶಯ ವ್ಯಕ್ತಪಡಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಆಯೋಜಿಸಿದ್ದ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಾಕಷ್ಟು ಜನರ ಬಳಿ ಮತದಾರರ ಗುರುತಿನ ಪತ್ರ ಇರುವುದಿಲ್ಲ. ಮಾತ್ರವಲ್ಲ ಪಟ್ಟಿಯಲ್ಲಿ ಸಹ ಹಲವರ ಹೆಸರಿರುವುದಿಲ್ಲ. ಹೀಗಾಗಿ ಪ್ರತಿ ಚುನಾವಣೆಯಲ್ಲಿ ಕೆಲವೆಡೆ ಶೇ.50 ರಿಂದ 60 ರಷ್ಟು ಮತ ಚಲಾವಣೆಯಾಗುತ್ತಿದೆ. ಮತದಾರರ ಪಟ್ಟಿ ತಯಾರಿಸುವ ಕರ್ತವ್ಯ ಸರ್ಕಾರದ್ದಾದರೂ 18 ವರ್ಷ ಮೀರಿದ ಎಲ್ಲರೂ ಸ್ವಯಂಪ್ರೇರಿತರಾಗಿ ಮತ ಚಲಾಯಿಸಲು ಮುಂದಾಗಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಅಮೂಲ್ಯವಾದ ಮತದಾನದ ಹಕ್ಕನ್ನು ಉಪಯೋಗಿಸಿಕೊಳ್ಳುವ ಮನಸ್ಥಿತಿ ಬರಬೇಕು. ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಂಡಲ್ಲಿ ಅತ್ಯುನ್ನತ ಕೊಡುಗೆ ಕೈಗೆ ಬಂದಂತಾಗುತ್ತದೆ. ಇದರಿಂದ ಸಮರ್ಥ ಪ್ರತಿನಿಧಿ ಆಯ್ಕೆ ಸಾಧ್ಯ. ಜಿಲ್ಲಾಧಿಕಾರಿ ಮತ್ತಿತರ ಅಧಿಕಾರಿಗಳು ಮತದಾರರ ಮನವೊಲಿಸಲು ಸಾಧ್ಯವಿಲ್ಲ. 18 ವರ್ಷ ಮೀರಿದವರು ಸ್ವಪ್ರಯತ್ನದಿಂದ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕು. ಈ ವಿಚಾರದಲ್ಲಿ ಹೆಣ್ಣು ಮಕ್ಕಳು ತಾತ್ಸಾರ ಮಾಡಬಾರದು ಎಂದರು.
ಎಲ್ಲ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಅರಿತುಕೊಂಡು ಅದರಲ್ಲಿರುವ ಅಂಶಗಳ ಜಾರಿ ಸಾಧ್ಯವೇ ಎಂಬುವುದನ್ನು ಅರ್ಥ ಮಾಡಿಕೊಂಡು ಜವಾಬ್ದಾರಿಯಿಂದ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಈಗಿನ ವ್ಯವಸ್ಥೆಯಲ್ಲಿ ಕೆಲವೇ ಸೆಕೆಂಡ್ಗಳಲ್ಲಿ ಮತ ಚಲಾಯಿಸುವ ವ್ಯವಸ್ಥೆ ಇದ್ದು, ಇಂತಹ ಅಮೂಲ್ಯ ಅಧಿಕಾರವನ್ನು ಸಂವಿಧಾನ ರಾಷ್ಟ್ರದ ಎಲ್ಲ ಪ್ರಜೆಗಳಿಗೆ ನೀಡಿದೆ. ಈ ಅಧಿಕಾರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರೌಢಶಾಲೆ, ಪದವಿ ಪೂರ್ವ, ಪದವಿ ಮತ್ತು ಸ್ನಾತ್ತಕೋತ್ತರ ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂಗವಿಕಲರು ಹಾಗೂ ಯುವ ಮತದಾರರಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ, ಎಡಿಸಿ ಡಾ. ಕುಮಾರ್, ತಹಸೀಲ್ದಾರ್ ನಂದಕುಮಾರ್, ಜಿಪಂ ಉಪ ಕಾರ್ಯದರ್ಶಿ ವೆಂಕಟೇಶ್, ಡಿಡಿಪಿಐ ಜಯಣ್ಣ, ಐಡಿಎಸ್ಐ ಕಾಲೇಜಿನ ಪ್ರಾಚಾರ್ಯ ನಟರಾಜ್ ಇತರರಿದ್ದರು.