ಟಿಕೆಟ್​ಗೆ ದೆಹಲಿಯಲ್ಲಿ ಪಟ್ಟು

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಮಗೆ ನೀಡಬೇಕೆಂದು ಮಾಜಿ ಸಚಿವ ವಿನಯ ಕುಲಕರ್ಣಿ ಪಟ್ಟು ಹಿಡಿದಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಅವರು ಸೋಮವಾರ ರಾತ್ರಿ ಹಠಾತ್ತನೆ ದೆಹಲಿಗೆ ತೆರಳಿದ್ದರು.

ಮಾಜಿ ಸಂಸದ ಐ.ಜಿ. ಸನದಿ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಒಲವು ತೋರಿಸಿದೆ ಎಂಬ ಮಾಹಿತಿ ಸಿಕ್ಕ ಬಳಿಕ ರಾತ್ರೋರಾತ್ರಿ ಬೆಂಗಳೂರಿನಿಂದ ದೆಹಲಿಗೆ ಹಾರಿದ್ದರು. ಅವರೊಂದಿಗೆ ಎಂಎಲ್​ಸಿ ಶ್ರೀನಿವಾಸ ಮಾನೆ, ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಕಿತ್ತೂರ ಹಾಗೂ ಪಕ್ಷದ ಜಿಪಂ, ತಾಪಂ ಸದಸ್ಯರು ಇದ್ದರು.

ವಿನಯ ಕುಲಕರ್ಣಿ ಹಾಗೂ ತಂಡಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಸಾಧ್ಯವಾಗಿಲ್ಲ. ಮಂಗಳವಾರ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ರಾಹುಲ ರಾತ್ರಿ ವೇಳೆ ದೆಹಲಿಗೆ ಮರಳುತ್ತಾರೆಂಬ ಮಾಹಿತಿ ತಿಳಿದು ಕೆಲವರು ಬೆಂಗಳೂರಿಗೆ ವಾಪಸಾಗಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿಗೇ ಟಿಕೆಟ್ ನೀಡಬೇಕೆಂಬುದು ಈ ಭೇಟಿಯ ಉದ್ದೇಶವಾಗಿತ್ತು. ರಾಜ್ಯದಲ್ಲಿ ತನ್ನ ಪಾಲಿಗೆ ಬಂದಿರುವ 20ರಲ್ಲಿ 19 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಘೊಷಿಸಿ ಆಗಿದೆ. ಧಾರವಾಡ ಮಾತ್ರ ಬಾಕಿ ಉಳಿದಿರುವುದು. ರಾಹುಲ ಗಾಂಧಿ ದೆಹಲಿಯಲ್ಲಿ ಲಭ್ಯರಿಲ್ಲದ ಕಾರಣ ಮಂಗಳವಾರ ಅಭ್ಯರ್ಥಿ ಹೆಸರು ಘೊಷಣೆ ವಿಳಂಬವಾಗಿದೆ. ಅವರು ರಾತ್ರಿ ವೇಳೆ ದೆಹಲಿಗೆ ಮರಳಿದ ಬಳಿಕ ಅಥವಾ ಬುಧವಾರ ಬೆಳಗ್ಗೆ ಹೆಸರು ಘೊಷಣೆಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಾರ್ಯಕರ್ತರಿಗೆ ಮುಜುಗರ: ಬಿಜೆಪಿಯವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ. ಕಾಂಗ್ರೆಸ್​ನ ಕಟ್ಟಾ ಕಾರ್ಯಕರ್ತರಿಗೂ ಪ್ರಚಾರ ಶುರು ಮಾಡುವ ಉಮೇದಿ ಇದೆ. ಆದರೆ, ಜನರ ಮಧ್ಯೆ ಹೋದಕೂಡಲೇ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಮುಂದಿಡುವುದ ರಿಂದ ಉತ್ತರಿಸುವುದು ಕಷ್ಟ. ಈ ಮುಜು ಗರದ ಸಂದರ್ಭ ಎದುರಾಗುವುದು ಬೇಡ ಎಂದು ಸಿದ್ಧತೆ ಮಾಡಿಕೊಂಡಿದ್ದರೂ ಹಲವರು ಪ್ರಚಾರ ಆರಂಭಿಸಿಲ್ಲ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. ಅಭ್ಯರ್ಥಿ ಯಾರಾದರೂ ಸರಿ, ಘೊಷಣೆ ಬೇಗ ಆಗಲಿ ಎನ್ನುವುದು ಕಾರ್ಯಕರ್ತರು ಹಾಗೂ ನಾಯಕರ ಅಹವಾಲು ಆಗಿದೆ.

ಮತಪಟ್ಟಿಯಲ್ಲಿ 69 ತೃತೀಯ ಲಿಂಗಿಗಳು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡದಲ್ಲಿ ನೂತನವಾಗಿ 69 ಜನ ತೃತೀಯ ಲಿಂಗಿಗಳು ಮತದಾನದ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ತೃತೀಯ ಲಿಂಗಿಗಳಲ್ಲಿ ಮತದಾನದ ಜಾಗೃತಿ ಮೂಡಿಸಿದ್ದರು. ಈ ಹಿನ್ನೆಲೆಯಲ್ಲಿ ತೃತೀಯ ಲಿಂಗಿಗಳು ಮತದಾನದ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ನೀಡಿದ್ದರು. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ 12 ಜನ, ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ 33 ಜನ, ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ 24 ಜನ ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ತೃತೀಯ ಲಿಂಗಿಗಳು ಮತದಾನ ಮಾಡುತ್ತಿದ್ದು, ನೂತನ ಮತದಾರರಿಗೆ ಚುನಾವಣಾ ಆಯೋಗದಿಂದ ಈಗಾಗಲೇ ಗುರುತಿನ ಚೀಟಿಯನ್ನೂ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ತಿಳಿಸಿದ್ದಾರೆ.

ಓಂ ಸೇನೆಯ 6 ಅಭ್ಯರ್ಥಿಗಳು ಕಣಕ್ಕೆ: ಲೋಕಸಭಾ ಚುನಾವಣೆಯಲ್ಲಿ ಓಂ ಸೇನಾ ವತಿಯಿಂದ ಸದ್ಯ ರಾಜ್ಯದ 6 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಸೇನೆ ಅಧ್ಯಕ್ಷ ಓಂ ಸಂಗಮೇಶ್ವರ ಐಹೊಳ್ಳಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಓಂ ಸಂಗಮೇಶ್ವರ ಐಹೊಳ್ಳಿ, ಸುಮಂಗಲಾ ಎಸ್. ಗಡಾದ, ಸುರೇಶ ಎಚ್., ಸೂರ್ಯಕಾಂತ ಕೋಲಕರ್, ರವಿ ಬಿ., ಜಗದೀಶ ಐಹೊಳ್ಳಿ ಸ್ಪರ್ಧಿಸುವರು. ಇನ್ನಷ್ಟು ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.