
ಲೋಕಾಪುರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವಂತೆ ಪಂಚಮಸಾಲಿ ಸಮಾಜದ ಮುಖಂಡ ಪ್ರಕಾಶ ಚುಳಕಿ ಒತ್ತಾಯಿಸಿದರು.
ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಸುತ್ತಮುತ್ತ ಬೇರೆ ಆಸ್ಪತ್ರೆಗಳಿಲ್ಲ. ದಿನನಿತ್ಯ ಹಲವಾರು ರೋಗಿಗಳು ಆಸ್ಪತ್ರೆಗೆ ಆಗಮಿಸುತ್ತಾರೆ. ಒಳರೋಗಿ ವಿಭಾಗ, ಹೊರ ರೋಗಿ ವಿಭಾಗ, ಶಸ್ತ್ರ ಚಿಕಿತ್ಸೆ, ಹೆರಿಗೆ ಹಾಗೂ ಶವ ಪರೀಕ್ಷೆಗಳಿಗೆ ಈ ಆಸ್ಪತ್ರೆಯೊಂದೇ ಆಸರೆಯಾಗಿದ್ದು, ಕೇವಲ ಒಬ್ಬ ವೈದ್ಯಾಧಿಕಾರಿ ಎಲ್ಲವನ್ನೂ ನಿರ್ವಹಿಸಬೇಕಾಗುತ್ತಿದೆ ಎಂದರು.
ದಲಿತ ಮುಖಂಡ ಮಹೇಶ ಹುಗ್ಗಿ ಮಾತನಾಡಿ, ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವು 5 ಉಪಕೇಂದ್ರ ಮತ್ತು 22 ಹಳ್ಳಿಗಳನ್ನು ಹೊಂದಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ, ಪ್ರಮೋದ ತೆಗ್ಗಿ, ಅರುಣ ನರಗುಂದ, ವಿನಾಯಕ ಗಂಗಣ್ಣವರ, ರವಿ ಚೌಧರಿ ಇದ್ದರು.