ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯಬಾರದು, ವಿಡಿಯೋ ಮಾಡಬಾರದು ಎಂದು ಆದೇಶ ಹೊರಡಿಸಿ ವಿವಾದ ಉಂಟಾಗಿದ್ದ ಪ್ರಕರಣ ಸದ್ಯಕ್ಕಂತೂ ಮುಗಿಯುವಂತಿಲ್ಲ. ಏಕೆಂದರೆ ಈ ಸಂಬಂಧ ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ದನಿ ಎತ್ತಿದ್ದು, ಸಂಬಂಧಿತ ಅಧಿಕಾರಿ/ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತಪಡಿಸಿದೆ.
ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಮಾಡಬಾರದು, ಫೋಟೋ ತೆಗೆಯಬಾರದು ಎಂದು ಸರ್ಕಾರ ನಿನ್ನೆ ಸಂಜೆ ಆದೇಶ ಹೊರಡಿಸಿದ ಬೆನ್ನಿಗೇ ಜನರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕಂಗಾಲಾದ ಸರ್ಕಾರ ಮಧ್ಯರಾತ್ರಿಯ ಸುಮಾರಿಗೆ ಮತ್ತೊಂದು ಆದೇಶವನ್ನು ಹೊರಡಿಸಿ, ಈ ಮೊದಲಿನ ನಿಷೇಧ ಆದೇಶವನ್ನು ಹಿಂಪಡೆದಿದ್ದಾಗಿ ತಿಳಿಸಿದೆ.
ಇದನ್ನೂ ಓದಿ: ಸರ್ಕಾರದ ಈ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ!; ಆರ್ಡರ್ ಹಿಂಪಡೆಯಲು ಆಗ್ರಹ..
ಆದರೆ ನಿಷೇಧ ಹಿಂಪಡೆ ಆದೇಶದಲ್ಲಿನ ಕನ್ನಡ ಬರಹದಲ್ಲಿ ಹಲವಾರು ತಪ್ಪುಗಳಿದ್ದರಿಂದ ಇಂದು ಬೆಳಗ್ಗೆ ಈ ಹೊಸ ಆದೇಶದ ಬಗ್ಗೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರದಿಂದಲೇ ಕನ್ನಡಕ್ಕಾಗದ ಅವಮಾನದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಅದೇ ಆದೇಶವನ್ನು ಸರಿಯಾದ ಬರಹದಲ್ಲಿ ಬರೆದು ಪರಿಷ್ಕೃತ ಆದೇಶವನ್ನು ಹೊರಡಿಸಿದೆ.
ಇದನ್ನೂ ಓದಿ: ಜನಾಕ್ರೋಶಕ್ಕೆ ಮಣಿದ ಸರ್ಕಾರ: ಸರ್ಕಾರಿ ಕಚೇರಿಗಳಲ್ಲಿ ಫೋಟೋ-ವಿಡಿಯೋ ಶೂಟಿಂಗ್ ಬ್ಯಾನ್ ಆದೇಶ ವಾಪಸ್
ಹೀಗೆ ಸರ್ಕಾರಿ ಉದ್ಯೋಗಿಯೇ ತಪ್ಪಾಗಿ ಕನ್ನಡದಲ್ಲಿ ಬರೆದು ಆದೇಶ ಹೊರಡಿಸಿದ್ದರ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ದೂರು ಹೋಗಿತ್ತು. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಪ್ರತಿಕ್ರಿಯಿಸಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ಕನ್ನಡವೇ ಗೊತ್ತಿಲ್ಲ ಅನ್ನುವಂತೆ ಬಹುತೇಕ ತಪ್ಪು ಪದಗಳನ್ನು ಬಳಸಿ ಕನ್ನಡವನ್ನು ಅಗೌರವಿಸಿದ್ದಾರೆ ಎಂಬ ದೂರು ಬಂದಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ ಮಾಡಿದ ತಪ್ಪನ್ನು ಬೆಳಗಾದ ಮೇಲೆ ತಿದ್ದಿಕೊಂಡ ಸರ್ಕಾರ: ವಾಪಸ್ ಪಡೆದ ಆದೇಶಕ್ಕೆ ಮತ್ತೊಮ್ಮೆ ತಿದ್ದುಪಡಿ!
ಅಲ್ಲದೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಗುರುತಿಸಿ ದೂರನ್ನು ಸಲ್ಲಿಸುತ್ತಿದ್ದಾರೆ. ಕನ್ನಡದ ಅರಿವಿಲ್ಲದೆ ಕರ್ನಾಟಕ ಸರ್ಕಾರದಲ್ಲಿ ಗೌರವಾನ್ವಿತ ಹುದ್ದೆಯಲ್ಲಿ ಇದ್ದು ಈ ರೀತಿಯ ತಪ್ಪುಗಳಿಂದ ಕೂಡಿದ ಆದೇಶ ಹೊರಡಿಸಿರುವುದು ಸರ್ಕಾರದ ಜವಾಬ್ದಾರಿ ಅಧಿಕಾರಿಯಾಗಿ ಮಾಡಿರುವ ನಿರ್ಲಕ್ಷ್ಯವಾಗಿದೆ. ಆದೇಶದಲ್ಲಿ ಕನ್ನಡದ ತಪ್ಪಾದ ಪದಗಳನ್ನು ಬಳಸಿರುವ ಅಧಿಕಾರಿ/ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಇಂತಹ ತಪ್ಪುಗಳಾದಂತೆ ಎಚ್ಚರವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್
ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..