ಟನ್ ಕಬ್ಬಿಗೆ 2,826 ರೂ.ಗೆ ಬೆಳೆಗಾರರ ಪಟ್ಟು

ಹಾವೇರಿ: ಪ್ರತಿಟನ್ ಕಬ್ಬಿಗೆ 2,826 ರೂ. ನೀಡುವಂತೆ ಕಬ್ಬು ಬೆಳೆಗಾರರು ಪಟ್ಟು ಹಿಡಿದರೆ, 2,613 ರೂ.ಗಳನ್ನು ನೀಡುವುದಾಗಿ ಕಾರ್ಖಾನೆಯವರು ಪಟ್ಟು ಹಿಡಿದರು. ಈ ಕಾರಣದಿಂದ ಇಬ್ಬರ ನಡುವೆ ಒಮ್ಮತ ಮೂಡದೇ ರೈತರು ಹೆಚ್ಚು ಬೆಲೆ ನೀಡುವ ಕಾರ್ಖಾನೆಗೆ ಕಬ್ಬು ಸಾಗಿಸಲು ನಿರ್ಧರಿಸಿದರು.

ನಗರದ ಎಸಿ ಕಚೇರಿಯಲ್ಲಿ ಶುಕ್ರವಾರ ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಕಬ್ಬಿನ ಬೆಲೆ ನಿಗದಿಯ ಸಭೆಯಲ್ಲಿ ರೈತರು ಹಾಗೂ ಕಾರ್ಖಾನೆಯವರ ನಡುವೆ ಬೆಲೆ ನಿಗದಿಗೆ ಒಮ್ಮತ ಮೂಡಲೇ ಇಲ್ಲ. ರೈತರು ಪ್ರತಿಟನ್ ಕಬ್ಬಿಗೆ 3,500 ರೂ.ಗಳನ್ನು ನೀಡಬೇಕು ಎಂದು ಮೊದಲು ಪಟ್ಟು ಹಿಡಿದಿದ್ದರು. ಕಾರ್ಖಾನೆಯವರು ಕೇಂದ್ರ ಸರ್ಕಾರ ನಿಗದಿಗೊಳಿಸಿದ ಎಫ್​ಆರ್​ಪಿ ದರ 2,613 ರೂ.ಗಳನ್ನು ಪ್ರತಿಟನ್​ಗೆ ನೀಡುವುದಾಗಿ ಹೇಳಿದರು. ಪರಿಣಾಮ ಇಬ್ಬರಲ್ಲಿಯೂ ಒಮ್ಮತ ಮೂಡದೇ ಇದ್ದರಿಂದ ರೈತರು ಹೆಚ್ಚು ಬೆಲೆ ನೀಡುವ ಕಾರ್ಖಾನೆಗೆ ಕಬ್ಬು ಸಾಗಿಸುತ್ತೇವೆ ಎಂದರು. ಅದಕ್ಕೆ ಅಧಿಕಾರಿಗಳು ಸಮ್ಮತಿಸಿದರು.

ಸಭೆಯ ಆರಂಭದಲ್ಲಿ ರೈತ ಮುಖಂಡ ಶಿವಾನಂದ ಗುರುಮಠ ಮಾತನಾಡಿ, ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಜಿ.ಎಂ. ಶುಗರ್ಸ್​ನವರಿಗೆ ಲೀಸ್ ಕೊಡುವ ಮುನ್ನ ಸಕ್ಕರೆ ಇಳುವರಿ 10.8ರಷ್ಟಿತ್ತು. ಇವರು ಲೀಸ್ ಪಡೆದ ನಂತರ ರೈತರಿಗೆ ಹೆಚ್ಚು ಸಕ್ಕರೆ ಇಳುವರಿ ಬರುವ ಹೊಸತಳಿಗಳನ್ನು ಗುತ್ತಿಗೆದಾರರೇ ನೀಡಿದರು. ರೈತರು ಅದನ್ನೆ ಬೆಳೆದು ಕಾರ್ಖಾನೆಗೆ ಸಾಗಿಸುತ್ತಿದ್ದಾರೆ. ಆದರೂ ಇವರು ಬಂದ ನಂತರ ಸಕ್ಕರೆ ಇಳುವರಿಯಲ್ಲಿಯೂ ಮೋಸ ಮಾಡಿ ಕೇವಲ 8.6ನಷ್ಟು ಇಳುವರಿ ತೋರಿಸುತ್ತಿದ್ದಾರೆ. ಇಳುವರಿ ಕಡಿಮೆ ತೋರಿಸಿ ಕಡಿಮೆ ದರ ನೀಡುವ ಹುನ್ನಾರವನ್ನು ಕಾರ್ಖಾನೆಯವರು ಗುತ್ತಿಗೆ ಪಡೆದಾಗಿನಿಂದಲೂ ಆರಂಭಿಸಿದ್ದಾರೆ ಎಂದು ದೂರಿದರು.

ಗುಜರಾತ್​ನಲ್ಲಿ ಟನ್ ಕಬ್ಬಿಗೆ ಅಲ್ಲಿನ ಕಾರ್ಖಾನೆಗಳು 4,400 ರೂ.ಗಳವರೆಗೆ ಹಣ ನೀಡುತ್ತಿವೆ. ನಮ್ಮ ರಾಜ್ಯದಲ್ಲಿ ಮಾತ್ರ ರೈತರಿಗೆ ಅನ್ಯಾಯವಾಗುತ್ತಿದೆ. ಒಂದು ಟನ್ ಕಬ್ಬಿನಿಂದ ಕನಿಷ್ಠ 1 ಕ್ವಿಂಟಾಲ್ ಸಕ್ಕರೆ ಉತ್ಪಾದನೆಯಾಗುತ್ತದೆ. ಸಕ್ಕರೆ ದರ ಸದ್ಯ ಕ್ವಿಂಟಾಲ್​ಗೆ 3,300 ರೂ.ಗಳಷ್ಟಿದೆ. ಸಕ್ಕರೆ ಉತ್ಪಾದನೆಯಿಂದ ಬರುವ ಮೊಲ್ಯಾಸಿಸ್​ನಿಂದ 240 ರೂ. ಸಿಪ್ಪೆಯಿಂದ 350 ರೂ. ಕರಿಬೂದಿಯಿಂದ 150 ರೂ. ಸೇರಿ ಒಟ್ಟು 740 ರೂ.ಗಳ ಆದಾಯವು ಉಪ ಉತ್ಪನ್ನಗಳಿಂದ ಕಾರ್ಖಾನೆಗಳಿಗೆ ಬರುತ್ತದೆ. ಇನ್ನು ಸಕ್ಕರೆ ಉತ್ಪಾದನೆಯ ಎಲ್ಲ ಖರ್ಚುವೆಚ್ಚ ಪ್ರತಿಟನ್​ಗೆ ಗರಿಷ್ಠ 800 ರೂ.ಗಳಷ್ಟಾಗುತ್ತದೆ. ಸಕ್ಕರೆಯ ಮಾರುಕಟ್ಟೆ ದರದಲ್ಲಿ 100 ರೂ.ಗಳನ್ನು ಕಾರ್ಖಾನೆಯವರು ಲಾಭವಾಗಿ ಪಡೆದು ಉಳಿದ ಹಣವನ್ನು ರೈತರಿಗೆ ನೀಡಬೇಕು. ಪ್ರತಿವರ್ಷ ಕಾರ್ಖಾನೆಯವರು 3ರಿಂದ 4 ಲಕ್ಷ ಟನ್​ಗಳಷ್ಟು ಕಬ್ಬು ನುರಿಸುತ್ತಿದ್ದು, ಟನ್​ಗೆ 100 ರೂ. ಲಾಭ ಪಡೆದರೂ 4 ಕೋಟಿ ರೂ.ಗಳ ಲಾಭವಾಗುತ್ತದೆ. ಆದರೂ ರೈತರಿಗೆ ಸೂಕ್ತ ದರ ನೀಡದೇ ಸತಾಯಿಸುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ವಿನೋದಕುಮಾರ ಹೆಗ್ಗಳಿಕೆ, ಎಸಿ ತಿಪ್ಪೇಸ್ವಾಮಿ, ತಹಸೀಲ್ದಾರ್ ಎಚ್.ಸಿ. ಶಿವಕುಮಾರ, ಕಾರ್ಖಾನೆ ಪರವಾಗಿ ನಿರ್ದೇಶಕ ಎ.ಸಿ. ಬಸವರಾಜ, ಸಿದ್ದಪ್ಪ, ಸಿಡಿಒ ರಾಮಚಂದ್ರಪ್ಪ, ರೈತ ಪ್ರತಿನಿಧಿಗಳಾದ ರಾಜಶೇಖರ ಬೆಟಗೇರಿ, ಸಿದ್ದರಾಜ ಕಲಕೋಟಿ ಸೇರಿದಂತೆ ಅನೇಕರು ಸಭೆಯಲ್ಲಿದ್ದರು.

ಕಾರ್ಖಾನೆಯವರು ಎಫ್​ಆರ್​ಪಿ ದರ 2,613 ಕೊಡುವುದಾಗಿ ತಿಳಿಸಿದ್ದಾರೆ. ರೈತರು ಕಳೆದ ಸಾರಿಯಷ್ಟು ದರ ಕೇಳಿದ್ದಾರೆ. ಹೀಗಾಗಿ ಸಭೆಯಲ್ಲಿ ಬೆಲೆ ನಿಗದಿಗೆ ಯಾವುದೇ ಒಮ್ಮತ ಮೂಡಿಲ್ಲ.

| ವಿನೋದಕುಮಾರ ಹೆಗ್ಗಳಿಕೆ, ಅಪರ ಜಿಲ್ಲಾಧಿಕಾರಿ ಹಾವೇರಿ