More

    ಶೈಕ್ಷಣಿಕ ಸಮಸ್ಯೆ ನಿವಾರಿಸಲು ಆಗ್ರಹ

    ವಿಜಯಪುರ: ರಾಜ್ಯದ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಲು ಆಗ್ರಹಿಸಿ ಎಐಡಿಎಸ್‌ಒ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಈ ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಸಾಕಷ್ಟು ಮನವಿ ಸಲ್ಲಿಸಲಾಗಿತ್ತು. ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಸಾಕಷ್ಟು ಹೋರಾಟ ಹಮ್ಮಿಕೊಂಡರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಹೊಸ ಸರ್ಕಾರವಾದರೂ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

    ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀಕರಣ ಹಾಗೂ ಕೋಮುವಾದಿಕರಣ ಮಾಡುವ ನಿಟ್ಟಿನಲ್ಲಿ ಎನ್‌ಇಪಿ-2020 ಜಾರಿಗೊಳಿಸಲಾಗಿದೆ. ಇದರ ವಿರುದ್ಧ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು ಎಂಬ ಘೋಷಣೆಯೊಂದಿಗೆ 35ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ ರಾಜ್ಯದಾದ್ಯಂತ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದನ್ನು ಗ್ರಹಿಸಿದ ಕಾಂಗ್ರೆಸ್ ಎನ್‌ಇಪಿ-2020 ಹಿಂಪಡೆಯುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿತ್ತು ಎಂದು ಸಂಘಟಕರು ನೆನಪಿಸಿದರು.

    ರಾಜ್ಯದ ಜನತೆಯು ಈ ಹಿಂದಿನ ಸರ್ಕಾರದ ಜನವಿರೋಧಿ ನೀತಿಗಳಿಂದ ರೋಸಿಹೋಗಿದ್ದು, ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ನಮ್ಮ ವಿದ್ಯಾರ್ಥಿಗಳ ಸಮುದಾಯಕ್ಕೂ ಸಾಕಷ್ಟು ನಿರೀಕ್ಷೆಯಿದೆ. ಪಠ್ಯಪುಸ್ತಕಗಳಲ್ಲಿ ವೈಜ್ಞಾನಿಕ ಮತ್ತು ಧರ್ಮ ನಿರಪೇಕ್ಷ ಮನೋಭಾವವನ್ನು ಬೆಳೆಸುವ ನಿಟ್ಟಿನಲ್ಲಿ ಪಠ್ಯಕ್ರಮದಲ್ಲಿ ರೂಪಿಸಬೇಕು. ಹಾಗೆಯೇ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಹಾಗೂ ಸಂಘಟನಾಕಾರರಾದ ಸದಾಶಿವ ಹಡಪದ, ಮಿಸಬಾ ಸಗರ್ ಇದ್ದರು.

    ಪ್ರಮುಖ ಬೇಡಿಕೆಗಳು

    * ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ಒದಗಿಸುವುದು
    * ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವುದು
    * ಪಠ್ಯಕ್ರಮದ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮನಿರಪೇಕ್ಷ ವಾತಾವರಣವನ್ನು ರಕ್ಷಿಸುವುದು
    * ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಖಾತ್ರಿಪಡಿಸುವುದು
    * ಎನ್‌ಇಪಿ-2020ರ ಅಪ್ರಜಾತಾಂತ್ರಿಕ ಹೇರಿಕೆಯನ್ನು ಕೈಬಿಡುವುದು
    * ಸ್ವಯಂ ಹಣಕಾಸು ಸಂಸ್ಥೆಗಳನ್ನು ನಿಲ್ಲಿಸಿ, ತಾರತಮ್ಯವಿಲ್ಲದೆ ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವುದು
    * ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡುವುದು
    * ಅತಿಥಿ ಶಿಕ್ಷಕರ ಹಕ್ಕುಗಳನ್ನು ರಕ್ಷಿಸುವುದು


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts