ಪರಿಹಾರ ಹಣ ಶೀಘ್ರ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ತಾಲೂಕಿನ ರೈತರಿಗೆ ಅಕ್ಕಿ-ಭತ್ತದ ಮೂರು ವರ್ಷಗಳ ಲೆಕ್ಕಾಚಾರದಲ್ಲಿ ಬರಬೇಕಾದ ಬಾಕಿ ಹಣವನ್ನು ಶೀಘ್ರದಲ್ಲಿಯೇ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ತಿಳಿಸಿದರು.

ಮಾ. 31ರೊಳಗಾಗಿ ಖಾತೆಗೆ ಜಮಾ ಮಾಡದಿದ್ದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಪ್ರಚಾರ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದ್ದರ ಹಿನ್ನೆಲೆಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿ ಮಾಹಿತಿ ನೀಡಿದರು.

ಚುನಾವಣಾ ಪ್ರಕ್ರಿಯೆಗೂ ಬೆಳೆ ವಿಮೆ ಪರಿಹಾರಕ್ಕೂ ಸಂಬಂಧ ಕಲ್ಪಿಸಬಾರದು. ಮತದಾನದಲ್ಲಿ ರೈತ ಸಮುದಾಯ ಪಾಲ್ಗೊಳ್ಳಬೇಕು. ಪರಿಹಾರ ಬಿಡುಗಡೆ ಶೀಘ್ರದಲ್ಲಿ ನಡೆಯಲಿದೆ. ಫೆ. 25ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯದಲ್ಲಿ ವಿವಿಧ 9 ಪ್ರಕರಣಗಳಿಗೆ ಸಂಬಂಧಿಸಿದ 209.14 ಕೋಟಿ ರೂ. ಬಿಡುಗಡೆಗೊಳಿಸುವಂತೆ ತೀರ್ವನಿಸಲಾಗಿದೆ. ಹಣಕಾಸು ಇಲಾಖೆಗೆ ಹಣ ಬಿಡುಗಡೆಗೆ ಸೂಚನೆ ನೀಡಲಾಗಿದೆ. ಇದರೊಂದಿಗೆ ಬ್ಯಾಂಕ್ ಸಿಬ್ಬಂದಿಯಿಂದ ಮೇಜರ್-ಮೈನರ್, ಮೈನರ್-ಮೇಜರ್ ಸಮಸ್ಯೆ ಬಗೆಹರಿಸಲು 14.62 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ ಹಾವೇರಿ ಜಿಲ್ಲೆಯ 4386 ರೈತರಿಗೆ 11.52 ಕೋಟಿ ಪರಿಹಾರ ಲಭ್ಯವಾಗಲಿದೆ. ರಾಜ್ಯದಲ್ಲಿ 2015-16ರ ಬೆಳೆ ವಿಮೆಯ ಅಕ್ಕಿ-ಭತ್ತ ಲೆಕ್ಕಾಚಾರ ವ್ಯತ್ಯಾಸದ 57.33 ಕೋಟಿ ರೂ, 2016-17ರ 65.67 ಕೋಟಿ ರೂ. ಬಿಡುಗಡೆಗೊಳ್ಳಲಿದೆ. ಹಣಕಾಸು ಇಲಾಖೆ ಹಣ ಬಿಡುಗಡೆಗೊಳಿಸಿದ ಕೂಡಲೆ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಚುನಾವಣಾ ಕಾರ್ಯಕ್ಕೆ ಸಹಕರಿಸಿ ಹಣ ಬಿಡುಗಡೆಗೆ ಎಲ್ಲ ಪ್ರಯತ್ನ ಕೈಗೊಳ್ಳಲಿದ್ದೇವೆ ಎಂದು ಮಂಜುನಾಥ ಭರವಸೆ ನೀಡಿದರು.

ಇದಕ್ಕೊಪ್ಪದ ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಮಲ್ಲೇಶಪ್ಪ ಪರಪ್ಪನವರ, ಮಾ. 31ರೊಳಗಾಗಿ ಖಾತೆಗೆ ಹಣ ಜಮಾ ಆಗದಿದ್ದರೆ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಯಾವ ಪಕ್ಷದವರನ್ನು ಗ್ರಾಮಗಳ ಒಳಗೆ ಬಿಟ್ಟುಕೊಳ್ಳದಂತೆ ರೈತ ಸಂಘದ ಗ್ರಾಮ ಘಟಕದ ಪದಾಧಿಕಾರಿಗಳಿಗೆ ಸೂಚಿಸಿದ್ದೇವೆ. 2015ರಿಂದ 2019 ರವರೆಗೆ ನಿರಂತರ ಹೋರಾಟ ನಡೆಸಿದ್ದೇವೆ. ಅದಕ್ಕೆ ಸ್ಪಂದಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಗಂಗಪ್ಪ, ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಹಕ್ಲಪ್ಪನವರ, ರೈತ ಮುಖಂಡರಾದ ಸೋಮಣ್ಣ ಜಡೆಗೊಂಡರ, ಕರಬಸಪ್ಪ ಆಲದಕಟ್ಟಿ, ಅಜ್ಜನಗೌಡ ಪಾಟೀಲ, ಚನ್ನಪ್ಪ ಪಾವಲಿ, ಬಸವರಾಜ ಆಲೂರ, ಅಶೋಕ ಸಂಶಿ, ಬಸವರಾಜ ಕರಿಯಪ್ಪನವರ ಉಪಸ್ಥಿತರಿದ್ದರು.

ಹಾನಗಲ್ಲಿನ ರೈತ ಮುಖಂಡ ಮಲ್ಲೇಶಪ್ಪ ಪರಪ್ಪನವರ ಅವರು ಅಕ್ಕಿ-ಭತ್ತದ ಲೆಕ್ಕಾಚಾರದಲ್ಲಿನ ತಪ್ಪನ್ನು ಬೆಳಕಿಗೆ ತಂದಿದ್ದರಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ರೈತರಿಗೆ ಕೋಟ್ಯಂತರ ಹಣ ಮತ್ತೆ ಬರುವಂತಾಗಿದೆ. ಇಲಾಖೆ ಹಾಗೂ ರೈತರಿಗೆ ಅನುಕೂಲವಾಗಿದೆ.

| ಬಿ.ಮಂಜುನಾಥ ಜೆಡಿ, ಕೃಷಿ ಇಲಾಖೆ