More

  ಎಲ್ಲ ರೈತರಿಗೂ ಬರ ಪರಿಹಾರ ನೀಡುವಂತೆ ಆಗ್ರಹ

  ಮೈಸೂರು: ಬರ ಪರಿಹಾರವನ್ನು ಜಿಲ್ಲೆಯ ಎಲ್ಲ ರೈತರಿಗೂ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.


  ಜಿಲ್ಲೆಯ ರೈತರು ಬರಗಾಲದಿಂದ ಸಂಕಷ್ಟದಲ್ಲಿದ್ದಾರೆ. ಕೃಷಿ ಚಟುವಟಿಕೆ ನಡೆಸಲು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಾರೆ. ಈ ನಡುವೆ, ಜಂಟಿ ಖಾತೆದಾರ ರೈತರಿಗೆ, ಬಗರ್‌ಹುಕುಂ ಸಾಗುವಳಿದಾರರಿಗೆ, ಗೇಣಿದಾರ ಸಾಗುವಳಿ ರೈತರಿಗೆ ಬರಪರಿಹಾರ ದೊರೆತಿಲ್ಲ. ಇವರಿಗೂ ಪರಿಹಾರ ಸಿಗುವಂತಾಗಬೇಕು ಎಂದು ರೈತರು ಒತ್ತಾಯಿಸಿದರು.


  ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 150 ರೂ. ನಿಗದಿಪಡಿಸಿದೆ. ಆದರೆ, ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಹಣ ಪಾವತಿ ಮಾಡಿಲ್ಲ. ಈ ಕುರಿತು ಇಳುವರಿ, ತೂಕ, ಹಣಕಾಸಿನ ಲೆಕ್ಕಪತ್ರಗಳ ಅವ್ಯವಹಾರದ ಪರಿಶೀಲನೆ ಮಾಡಲು ಸಕ್ಕರೆ ಅಭಿವೃದ್ಧಿ ಆಯುಕ್ತರು ಸಮಿತಿ ಸಹ ರಚಿಸಿದ್ದಾರೆ. ತಕ್ಷಣ ಮುಂದಿನ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


  ಮಳೆ-ಗಾಳಿಯಿಂದ ಜಿಲ್ಲೆಯಲ್ಲಿ ಬಾಳೆ, ಕಬ್ಬು, ಮಾವು ಸೇರಿದಂತೆ ಇನ್ನಿತರ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ಈ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಸಮೀಕ್ಷೆ ನಡೆಸಿ ನ್ಯಾಯಯುತ ಪರಿಹಾರ ನೀಡಬೇಕು. ಮಳೆಗಾಲ ಆರಂಭವಾಗುತ್ತಿರುವ ಕಾರಣ ಜಿಲ್ಲೆಯ ಎಲ್ಲ ಕೆರೆಗಳು, ಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯ ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಇದರಿಂದ ಬಾವಿಗಳ ಅಂತರ್ಜಲ ವೃದ್ಧಿಯಾಗುತ್ತದೆ ಎಂದು ಎಂದು ಮನವಿ ಮಾಡಿದರು.


  ಬ್ಯಾಂಕ್‌ಗಳು ಸರ್ಕಾರದ ಪರಿಹಾರದ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ಎಲ್ಲ ಬ್ಯಾಂಕ್‌ಗಳಲ್ಲಿ ರೈತರಿಗೆ ದೊರೆಯುವ ಸಾಲದ ಕುರಿತು ಫಲಕದ ಮೂಲಕ ಮಾಹಿತಿ ನೀಡಬೇಕು. ಸಾಲ ವಸೂಲಾತಿಗಾಗಿ ಖಾಸಗಿ ಹಣಕಾಸು ಸಂಸ್ಥೆಗಳ ಕಿರುಕುಳವನ್ನು ನಿಯಂತ್ರಿಸಬೇಕು ಎಂದು ರೈತರು ಒತ್ತಾಯಿಸಿದರು.


  ಎನ್‌ಆರ್‌ಇಜಿ ಕಾಮಗಾರಿ ಹಣ ಬಿಡುಗಡೆ ಮಾಡಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಮೊಬೈಲ್ ಮೂಲಕ ನಡೆಯುವ ಆನ್‌ಲೈನ್ ಗೇಮ್ ಅನ್ನು ರದ್ದುಗೊಳಿಸಲು ಸರ್ಕಾರಕ್ಕೆ ವರದಿ ನೀಡಬೇಕು ಎಂದು ಒತ್ತಾಯಿಸಿದರು.


  ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ, ರಾಜೇಂದ್ರ ಅವರು, ಮಳೆಯಿಂದ ಉಂಟಾದ ಬಾಳೆ ಬೆಳೆ ನಷ್ಟದ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ 780 ರೈತರು 375 ಹೆಕ್ಟೇರ್‌ನಲ್ಲಿ ಬೆಳೆದ ಬಾಳೆ ಬೆಳೆ ನಾಶವಾಗಿದೆ. ಬ್ಯಾಂಕ್‌ಗಳ ಕಿರುಕುಳ ಸೇರಿದಂತೆ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.


  ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ನೀಲಕಂಠಪ್ಪ, ಗಿರೀಶ್, ನಂಜುಂಡಸ್ವಾಮಿ, ಸಿದ್ದರಾಮ, ಸೋಮಣ್ಣ, ಪ್ರಕಾಶ್, ಸೋಮು, ಕಾಟೂರ್ ನಾಗೇಶ್ ಮನವಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts