ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹ

ಚಾಮರಾಜನಗರ: ನಗರದ ಚೆನ್ನಿಪುರಮೋಳೆ ಬಡಾವಣೆಯಲ್ಲಿ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ನಿವಾಸಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಬಡಾವಣೆ ನಿವಾಸಿಗಳು ಶನಿವಾರ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಅಪೂರ್ಣಗೊಂಡಿರುವ ರಸ್ತೆ ಬಳಿ ಜಮಾಯಿಸಿದ ನಿವಾಸಿಗಳು, ನಗರಸಭೆಯ ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯ 24 ನೇ ವಾರ್ಡ್ ವ್ಯಾಪ್ತಿಗೆ ಬರುವ ಚೆನ್ನಿಪುರಮೋಳೆ ಬಡಾವಣೆಯಲ್ಲಿ ಸುಮಾರು 500 ಮೀ. ಉದ್ದದ ರಸ್ತೆಯನ್ನು ಡಾಂಬರೀಕರಣ ಮಾಡುವ ಉದ್ದೇಶದಿಂದ 3 ತಿಂಗಳ ಹಿಂದೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಸ್ಥಳೀಯ ನಗರಸಭೆ ಸದಸ್ಯರು ಕಮಿಷನ್ ಆಸೆಯಿಂದ ಕಾಮಗಾರಿಯನ್ನು ತಡೆದಿದ್ದು, ಒಂದು ತಿಂಗಳಿಂದಲೂ ರಸ್ತೆ ಕಾಮಗಾರಿ ಸ್ಥಗಿತಗೊಂಡಿದೆ ಎಂದರು.

ರಸ್ತೆಗೆ ಜಲ್ಲಿಕಲ್ಲುಗಳನ್ನು ಹಾಕಲಾಗಿದ್ದು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಇದರಿಂದ ನಿವಾಸಿಗಳಿಗೆ ಓಡಾಡಲು ತೊಂದರೆಯಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಇದರಿಂದ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಯುಕ್ತರು ಸ್ಥಳಕ್ಕೆ ಬಂದು ಕಾಮಗಾರಿಯನ್ನು ವೀಕ್ಷಿಸಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ನಗರಸಭೆಯ ಸ್ಥಳೀಯ ಸದಸ್ಯರ ಒತ್ತಡದಿಂದಾಗಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಬಡಾವಣೆಗೆ ಹೂವಿನ ಖರೀದಿಗೆ ಬರುವವರಿಗೆ ತೊಂದರೆಯಾಗುತ್ತಿದೆ ಎಂದರು.

ಮೂಲ ಸೌಕರ್ಯ ಕಲ್ಪಿಸಿ
ಬಡಾವಣೆಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಶೌಚಗೃಹ ಸಮಸ್ಯೆ ಹೆಚ್ಚಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕು. ಅಲ್ಲದೆ ಏ.1 ರಂದು ಬಡಾವಣೆಯಲ್ಲಿ ದೊಡ್ಡಮ್ಮತಾಯಿ ಕೊಂಡೋತ್ಸವವಿದ್ದು ಅಲ್ಲಿಯತನಕ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಬಡಾವಣೆಯ ನಿವಾಸಿಗಳು ನಗರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರ ಮನವಿ ಆಲಿಸಿ ಮಾತನಾಡಿದ ಸ್ಥಳಕ್ಕಾಗಮಿಸಿದ ನಗರಸಭೆ ಎಇಇ ಸತ್ಯಮೂರ್ತಿ, ಕಾಮಗಾರಿಯನ್ನು ನಾಳೆಯಿಂದಲೇ ಆರಂಭಿಸಲಾಗುವುದು. ಮೊದಲಿಗೆ ಡಸ್ಟ್, ನೀರು ಹಾಕಿ ರೋಲರ್‌ನಿಂದ ಹದ ಮಾಡಿಸಿ ಓಡಾಡಲು ಅನುಕೂಲ ಕಲ್ಪಿಸಲಾಗುವುದು. ಆ ನಂತರ ರಸ್ತೆಗೆ ಡಾಂಬರೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.

ಪ್ರತಿಭಟನೆಯಲ್ಲಿ ಕಾರ್ತಿಕ್, ರಾಮಕೃಷ್ಣ, ರಾಜು, ಕಿರಣ್, ಕೆಂಪರಾಜು, ಸೋಮು, ಆನಂದ್, ಜಯಲಕ್ಷ್ಮೀ, ಬಂಗಾರಮ್ಮ, ರಾಜಮ್ಮ, ಪಾರ್ವತಮ್ಮ, ಮಿಣಕಮ್ಮ ಇತರರು ಪಾಲ್ಗೊಂಡಿದ್ದರು.