ರಸ್ತೆ ಕಾಮಗಾರಿ ತ್ವರಿತಗೊಳಿಸಲು ಆಗ್ರಹ

 

ಗಂಗೊಳ್ಳಿ: ಗಂಗೊಳ್ಳಿ ಮುಖ್ಯರಸ್ತೆ ಕಾಂಕ್ರೀಟ್ ಕಾಮಗಾರಿಯಿಂದ ಜನರ ಬದುಕು ಹೈರಾಣಾಗಿದೆ. ಶಾಲಾ ಮಕ್ಕಳು ಹಾಗೂ ಪ್ರತಿನಿತ್ಯ ಕೆಲಸಕ್ಕೆ ತೆರಳುವ ನೂರಾರು ಜನರು ಇಲಾಖೆ ಕಾರ್ಯವೈಖರಿಯಿಂದ ರೋಸಿ ಹೋಗಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ.

ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಗಂಗೊಳ್ಳಿ ಪಂಚಾಯಿತಿ ಕಚೇರಿಯಿಂದ ಮೇಲ್‌ಗಂಗೊಳ್ಳಿ ವಾಟರ್ ಟ್ಯಾಂಕ್‌ವರೆಗಿನ ಸುಮಾರು 700 ಮೀ. ಉದ್ದದ ಮುಖ್ಯರಸ್ತೆಯ ಕಾಂಕ್ರೀಟ್ ಕಾಮಗಾರಿ 12 ದಿನಗಳಿಂದ ನಡೆಯುತ್ತಿದೆ. ಮುಖ್ಯರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಪ್ರತಿನಿತ್ಯ ಲಾರಿ, ಬಸ್ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇನ್ನೊಂದೆಡೆ ಧೂಳಿನಿಂದ ರಸ್ತೆಯ ಇಕ್ಕೆಲಗಳಲ್ಲಿ ವಾಸವಾಗಿರುವ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಬಸ್ ಹಾಗೂ ಇನ್ನಿತರ ವಾಹನಗಳು ಗಂಗೊಳ್ಳಿ ಪೇಟೆ ಪ್ರವೇಶಿಸಲು ಮುಖ್ಯರಸ್ತೆ ಏಕೈಕ ಮಾರ್ಗವಾಗಿದ್ದು, ಬೇರೆ ಪರ್ಯಾಯ ರಸ್ತೆಗಳಿಲ್ಲ. ಹೀಗಾಗಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಕಾಮಗಾರಿ ಪ್ರಾರಂಭವಾಗಿ 12 ದಿನ ಕಳೆದರೂ ರಸ್ತೆಯ ಒಂದು ಭಾಗ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಬಸ್‌ಗಳು ಗಂಗೊಳ್ಳಿ ಪೇಟೆ ಪ್ರವೇಶಿಲು ಸಾಧ್ಯವಾಗದೆ ಸುಮಾರು 2 ಕಿ.ಮೀ. ದೂರದಲ್ಲಿ ನಿಲ್ಲುತ್ತಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಡೆದು ಸಾಗಬೇಕಾಗಿದೆ. ಆಟೋ ರಿಕ್ಷಾ ಚಾಲಕರು ಪ್ರಯಾಣಿಕರಿಂದ ಹೆಚ್ಚುವರಿ ದರವನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗುತ್ತಿಗೆದಾರರ ಆಮೆಗತಿಯ ಕಾಮಗಾರಿಯಿಂದಾಗಿ ಇಡೀ ಗಂಗೊಳ್ಳಿ ಪೇಟೆ ಸ್ತಬ್ಧಗೊಂಡಿದ್ದು, ಜನರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೆರೆಡು ದಿನಗಳೊಳಗೆ ಕಾಮಗಾರಿ ಚುರುಕುಗೊಳ್ಳದಿದ್ದಲ್ಲಿ ಜನರು ಬೀದಿಗಿಳಿಯುವುದು ನಿಶ್ಚಿತ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಗಂಗೊಳ್ಳಿ ಮುಖ್ಯರಸ್ತೆ ಕಾಮಗಾರಿಯಿಂದ ಬಹಳ ತೊಂದರೆಯಾಗಿದೆ. ಅನಿವಾರ್ಯವಾಗಿ ಆಟೋ ರಿಕ್ಷಾ ಮೊರೆ ಹೋಗಬೇಕಾಗಿದ್ದು, ಪ್ರತಿನಿತ್ಯ 20-30 ರೂ. ಹೆಚ್ಚುವರಿ ವ್ಯಯವಾಗುತ್ತಿದೆ. ಅಲ್ಲದೆ ಸಮಯ ಕೂಡ ವ್ಯರ್ಥವಾಗುತ್ತಿದೆ. 12 ದಿನಗಳಿಂದ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದರೂ, ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಕಾಮಗಾರಿ ತ್ವರಿತವಾಗಿ ಮಾಡಲು ಸೂಚನೆ ನೀಡಬೇಕು.
ಅಶೋಕ, ನಿತ್ಯ ಪ್ರಯಾಣಿಕ, ಗಂಗೊಳ್ಳಿ

ಮುಖ್ಯರಸ್ತೆ ಕಾಂಕ್ರೀಟ್ ಕಾಮಗಾರಿ ಆದಷ್ಟು ಶೀಘ್ರ ಮುಗಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗಿದ್ದು, ಕಾಮಗಾರಿ ಪೂರ್ಣಗೊಳ್ಳುವ ತನಕ ಪರ್ಯಾಯ ರಸ್ತೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ.
ಸುರೇಂದ್ರ ಖಾರ್ವಿ, ತಾಪಂ ಸದಸ್ಯರು, ಗಂಗೊಳ್ಳಿ

ಗಂಗೊಳ್ಳಿ ಮುಖ್ಯರಸ್ತೆ ಕಾಂಕ್ರೀಟ್ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ವಾಹನ ಸವಾರರಿಗೆ ಮತ್ತು ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಏಕಮುಖ ವಾಹನ ಸಂಚಾರದ ಬಗ್ಗೆ ಪಿಡಬ್ಲ್ಯುಡಿ ಮತ್ತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಕಾಮಗಾರಿ ಸ್ಥಳದಲ್ಲಿ ಸಿಬ್ಬಂದಿ ನಿಯೋಜನೆಗೂ ಕಷ್ಟವಾಗುತ್ತಿದೆ.
ವಾಸಪ್ಪ ನಾಯ್ಕ, ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್ ಠಾಣೆ