ಶಿಗ್ಗಾಂವಿ: ಕರ್ನಾಟಕ ಬಂದ್ ಬೆಂಬಲಿಸಿ, ಎಂಇಎಸ್ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಸಮಿತಿ ಅಧ್ಯಕ್ಷ ಸುರೇಶ ವನಹಳ್ಳಿ ಮಾತನಾಡಿ, ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಎಂಇಎಸ್ ಹಾಗೂ ಇತರ ಸಂಘಟನೆ ಕನ್ನಡಿಗರೊಂದಿಗೆ ತಂಟೆ-ತಕರಾರು ಮಾಡುತ್ತ ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ದ್ವೇಷದ ಮನೋಭಾವನೆ ಉಂಟು ಮಾಡುತ್ತಿದ್ದಾರೆ. ಇದರಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕ ಮಧ್ಯೆ ಕಂದಕ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಉಪಾಧ್ಯಕ್ಷ ರಮೇಶ ಹರಿಜನ ಮಾತನಾಡಿ, ಎಂಇಎಸ್ ಸಂಘಟನೆಯು ಗಡಿಭಾಗದಲ್ಲಿ ಅರಾಜಕತೆ ವಾತಾವರಣ ಸೃಷ್ಟಿ ಮಾಡಿ, ಮರಾಠಿ ಭಾಷಿಗರನ್ನು ಕನ್ನಡಿಗರ ಮೇಲೆ ಎತ್ತಿಕಟ್ಟಲು ಸದಾ ಹವಣಿಸುತ್ತಿದೆ. ಇಂತಹ ಸಂಘಟನೆಯಿಂದ ಮರಾಠಿ ಹಾಗೂ ಕನ್ನಡ ಭಾಷಿಕರು ಸದಾಕಾಲ ಎಚ್ಚರದಿಂದ ಇರಬೇಕು. ಇತ್ತೀಚೆಗೆ ಬೆಳಗಾವಿ ನಗರ ಸಾರಿಗೆ ಬಸ್ ನಿರ್ವಾಹಕರ ಮೇಲಿನ ಹಲ್ಲೆ ಮಾಡಿದ ಘಟನೆ ನಡೆದಿದೆ. ರಾಜ್ಯ ಸರ್ಕಾರ ಇಂತಹ ದುಷ್ಕೃತ್ಯ ನಡೆಸುವವರ ಮೇಲೆ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಭರಮಪ್ಪ ದೊಡ್ಡಮನಿ, ರಮೇಶ ಈಟಿ, ಖಾಸೀಮ್ಾಬ್ ಮುಲ್ಲಾ, ದಾವಲಸಾಬ್ ಸಿಂಪಿಗೇರ, ಶಂಕರನಾಗ ಆಟೋ ಚಾಲಕರ ಸಂಘದ ಸದಸ್ಯರು ಇದ್ದರು.