ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಾಗುತ್ತಿರುವ ಆಕ್ರಮಣ ಖಂಡಿಸಿ ಭಾನುವಾರ ಫ್ರೀಡಂ ಪಾರ್ಕ್‌ನಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಅಡಿಯಲ್ಲಿ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದು, ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.
ಈ ವೇಳೆ ಹಿಂದು ಜನಜಾಗೃತಿ ಸಮಿತಿಯ ಭವ್ಯ ಗೌಡ ಮಾತನಾಡಿ, ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಮೀಸಲಾತಿಯಿಂದ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಅರಾಜಕತೆ ನಿರ್ಮಾಣವಾಗಿದೆ. ಸರಕಾರದ ವಿರುದ್ಧದ ಪ್ರತಿಭಟನೆ ನೆಪದಲ್ಲಿ ಅಲ್ಲಿನ ಹಿಂದುಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಜಿಹಾದಿಗಳು ಹಿಂದು ಸ್ತ್ರೀಯರು, ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಇತ್ತೀಚಿಗೆ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ತೈನ್‌ನಲ್ಲಿ ಏನಾದರೂ ಘಟಿಸಿದರೆ ಅದರ ಬಗ್ಗೆ ವಿಶ್ವಸಂಸ್ಥೆಯಲ್ಲಿ ಚರ್ಚಿಸಲಾಗುತ್ತದೆ. ಆದರೆ, ಬಾಂಗ್ಲಾದೇಶದ ಹಿಂದುಗಳ ಮೇಲಾಗುತ್ತಿರುವ ಆಕ್ರಮಣಗಳ ಬಗ್ಗೆ ಜಗತ್ತಿನಲ್ಲಿ ಯಾರೂ ಧ್ವನಿಯೆತ್ತುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಬಾಂಗ್ಲಾ ಹಿಂದುಗಳ ರಕ್ಷಣೆಗೆ ತಕ್ಷಣ ಮುಂದಾಗಬೇಕು. ಬಾಂಗ್ಲಾದೇಶಿ ಹಿಂದುಗಳ ಮೇಲಾಗಿರುವ ಅತ್ಯಾಚಾರದ ಕುರಿತು ವಿಶೇಷ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಭಾರತದಲ್ಲಿ ಅಲ್ಪಸಂಖ್ಯಾತ ಆಯೋಗವಿರುವಂತೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಆಯೋಗದ ಸ್ಥಾಪನೆ ಮಾಡಿ ಅಲ್ಲಿನ ಹಿಂದುಗಳಿಗೆ ನ್ಯಾಯವನ್ನು ನೀಡಬೇಕು. ವಿಶ್ವಸಂಸ್ಥೆಯಲ್ಲಿ ಈ ವಿಷಯವನ್ನು ಮಂಡಿಸಿ ವಿಶೇಷ ನಿಯೋಗವು ಬಾಂಗ್ಲಾದೇಶಕ್ಕೆ ಕಳುಹಿಸಿ ಅಲ್ಲಿನ ಪೀಡಿತ ಹಿಂದು ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರಕಾರ ನೆರವಿಗೆ ಮುಂದಾಗಲಿ:
ರಾಷ್ಟ್ರಧರ್ಮ ಸಂಘಟನೆಯ ಸಂತೋಷ್ ಕೆಂಚಾಂಬ ಮಾತನಾಡಿ, ಭಾರತದಲ್ಲಿರುವ ಸೆಕ್ಯುಲರ್‌ವಾದಿಗಳು, ಬುದ್ಧಿಜೀವಿಗಳು ಟರ್ಕಿಯಲ್ಲಿ ಗಲಾಟೆಯಾದರೆ ಅದರ ವಿರುದ್ಧ ಧ್ವನಿಯೆತ್ತುತ್ತಾರೆ. ಪ್ಯಾಲಿಸ್ಟೈನ್‌ನಲ್ಲಿ ಭಯೋತ್ಪಾದಕರನ್ನು ಹತ್ಯೆ ಮಾಡಿದರೆ ಧ್ವನಿಯೆತ್ತುತ್ತಾರೆ. ಆದರೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಾಗುತ್ತಿರುವ ಆಕ್ರಮಣಗಳ ಬಗ್ಗೆ ಯಾರೂ ತುಟಿಬಿಚ್ಚುವುದಿಲ್ಲ. ಇದು ಅವರ ಢೋಂಗಿ ಮಾನಸಿಕತೆಯನ್ನು ತೋರಿಸುತ್ತದೆ. ಕೇಂದ್ರ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಬಾಂಗ್ಲಾದ ಹಿಂದುಗಳ ನೆರವಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್‌ನ ಕಾರ್ಯದರ್ಶಿ ಡಾ. ಮಹೇಶ್ ಕುಮಾರ್ ಬಿ.ಎನ್, ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ, ಹಿಂದವೀ ಜಟ್ಕಾ ಮೀಟ್‌ಸಂಸ್ಥಾಪಕ ಮುನೇಗೌಡ, ಅಜಾದ್ ಬ್ರಿಗೇಡ್‌ನ ಗಜೇಂದ್ರ ಸಿಂಗ್, ಶಿವಘರ್ಜನೆ ಯುವಸೇನೆಯ ಅಧ್ಯಕ್ಷ ಪ್ರವೀಣ್ ಮಾನೆ, ಸಮಸ್ತ ವಿಶ್ವಧರ್ಮ ರಕ್ಷಾ ಸೇವಾ ಸಂಸ್ಥಾನದ ಯೋಗಿ ಸಂಜೀತ್ ಸುವರ್ಣ ಹಾಗೂ ಇತರರಿದ್ದರು.