ಶಿವಮೊಗ್ಗ: ಪಡಿತರ ವಿತರಣೆಯಲ್ಲಿನ ಕಮಿಷನ್ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಪಡಿತರ ವಿತರಕರ ಜಿಲ್ಲಾ ಸಂಘದಿಂದ ಜಿಲ್ಲಾಡಳಿತಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಇದೇ ವೃತ್ತಿಯಲ್ಲಿರುವ ನಮಗೆ ಆರ್ಥಿಕ ಭದ್ರತೆ ಅಗತ್ಯವಿದೆ. ಹೀಗಾಗಿ ಕಮಿಷನ್ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.
ಆರಂಭದ ಹಲವು ವರ್ಷ ಪಡಿತರ ಧಾನ್ಯದ ಜತೆಗೆ ಕಾಟನ್ ಸೀರೆ, ಪಂಚೆ ಮುಂತಾದ ವಸ್ತ್ರಗಳು, ಸಕ್ಕರೆ, ಮೈದಾಹಿಟ್ಟು, ಖಾದ್ಯ ತೈಲ ಮುಂತಾದವುಗಳನ್ನೂ ವಿತರಣೆ ಮಾಡುತ್ತಿದ್ದೆವು. ಇದರಿಂದ ಹೆಚ್ಚಿನ ಕಮಿಷನ್ ದೊರೆಯುತ್ತಿತ್ತು. ಆದರೆ ಈಗ ಕೇವಲ ಅಕ್ಕಿಯನ್ನು ವಿತರಣೆ ಮಾಡುತ್ತಿರುವುದರಿಂದ ನ್ಯಾಯಬೆಲೆ ಅಂಗಡಿ ನಿರ್ವಹಣೆಯೇ ಹೊರೆಯಾಗುತ್ತಿದೆ ಎಂದು ತಿಳಿಸಿದರು.
ಇ-ಕೆವೈಸಿ ಮಾಡಿಸಿದರೂ ಕಮಿಷನ್ ನೀಡುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಒಂದು ಕ್ವಿಂಟಾಲ್ ಪಡಿತರ ವಿತರಣೆ ಮಾಡಿದರೆ 250-300 ರೂ. ಕಮಿಷನ್ ನೀಡುತ್ತಾರೆ. ನಮ್ಮ ರಾಜ್ಯದಲ್ಲಿ ಈ ಪ್ರಮಾಣ 124 ರೂ. ಮಾತ್ರ. ಹೀಗಾಗಿ ಬೇರೆ ರಾಜ್ಯಗಳ ಮಾದರಿಯಲ್ಲೇ ನಮಗೂ ಕಮಿಷನ್ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ಕಾರ್ಯದರ್ಶಿ ಮುರುಗೇಶ್, ಪ್ರಮುಖರಾದ ಲೋಕೇಶ್, ದೇವರಾಜ್, ಲೋಕೇಶಪ್ಪ, ಲಕ್ಷ್ಮೀಕಾಂತ್, ಜವರಾಯ, ರುದ್ರಪ್ಪ ಇತರರಿದ್ದರು.