ಕಬ್ಬಿನ ದರ ನಿಗದಿಗೆ ಆಗ್ರಹ

ಮಂಡ್ಯ: ಎಲ್ಲ ರಾಜಕೀಯ ಪಕ್ಷಗಳು ರೈತರ ಪರವಾಗಿ ಮಾತನಾಡುತ್ತವೆ. ರೈತರೇ ನಮ್ಮ ದೇವರು ಎಂಬಂತೆ ಮಾತನಾಡುತ್ತವೆ. ಸಾಲ ಮನ್ನಾ, ಸಬ್ಸಿಡಿ, ಸಾಲಸೌಲಭ್ಯ ನೀಡುವ ಬಗ್ಗೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದು ರೈತರನ್ನು ಸಬಲರನ್ನಾಗಿ ಮಾಡುತ್ತೇವೆ ಎಂದು ಪುಂಖಾನುಪುಂಖವಾಗಿ ಭಾಷಣ ಮಾಡುತ್ತಲೇ ಇರುತ್ತಾರೆ.

ಆದರೆ, ರೈತರ ಸ್ಥಿತಿ ದಿನೇ ದಿನೆ ಅಧೋಗತಿಯತ್ತ ಸಾಗುತ್ತಿದೆಯೇ ಹೊರತು ಕೊಂಚವೂ ಸುಧಾರಿಸುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೆ ಪ್ರೋತ್ಸಾಹ ಧನದ ಮಾತನಾಡುವ ಸರ್ಕಾರಗಳು ವೈಜ್ಞಾನಿಕ ಬೆಲೆ ಬಗ್ಗೆ ಮಾತನಾಡಲ್ಲ. ಕಣ್ಣಾಮುಚ್ಚಾಲೆಯಾಡುವ ಕರೆಂಟ್ ಕಾದು ಹಗಲಿ ರುಳನ್ನದೆ ನೀರು ಹಾಯಿಸಿ ಬೆಳೆದ ಕಬ್ಬಿಗೆ ದರ ನಿಗದಿ ಮಾಡಿಲ್ಲ. ಹಾಳಾಗಿ ಹೋಗಲಿ ಕಾರ್ಖಾನೆಗೆ ಸಾಗಿಸಿದ ಕಬ್ಬಿನ ಹಣ ಕೊಡಿಸುವ ಬಗ್ಗೆ ಮಾತನಾಡಲ್ಲ.

ರೈತರು ತಮ್ಮ ಕಬ್ಬಿನ ಹಣಕ್ಕಾಗಿ ಪ್ರತಿಭಟನೆ ಮಾಡಿ, ರಸ್ತೆ ಸಂಚಾರ ತಡೆ ಮಾಡಿ ಗೋಳಾಡಿ ವರುಷಗಟ್ಟಲೇ ಕಾದು ಹಣ ಪಡೆಯ ಬೇಕು. ಇವತ್ತಿಗೂ ಕೆ.ಎಂ.ದೊಡ್ಡಿಯ ಚಾಂಷುಗರ್ ಕಾರ್ಖಾನೆ 25 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದರೆ, ಕೊಪ್ಪದ ಎನ್‌ಎಸ್‌ಎಲ್ ಕಾರ್ಖಾನೆ 24 ಕೋಟಿ ರೂ. ಕೊಡಬೇಕಿದೆ. ಕೆ.ಆರ್.ಪೇಟೆಯ ಐಸಿಎಲ್ ಟನ್‌ಗೆ 2500 ರೂ. ಕೊಟ್ಟಿದ್ದು 162 ರೂ. ಬಾಕಿ ಉಳಿಸಿಕೊಂಡಿದೆ. ಚುನಾವಣೆ ಬಂದ ಪುಣ್ಯದಿಂದ ಮೈಶುಗರ್ ಕಾರ್ಖಾನೆ ರೈತರಿಗೆ ಬಟವಾಡೆ ಆಗಿದೆ.

ಕಬ್ಬು ಮತ್ತೆ ಕಟಾವಿಗೆ ಬರುತ್ತಿದ್ದು, ಇನ್ನೂ ರಾಜ್ಯ ಸರ್ಕಾರ ದರ ನಿಗದಿ ಮಾಡಿಲ್ಲ. ಮೈಶುಗರ್, ಪಿಎಸ್‌ಎಸ್‌ಕೆ ಆರಂಭದ ಬಗ್ಗೆ ಮಾಹಿತಿಯಿಲ್ಲ. ದರ ನಿಗದಿ ಹಾಗೂ ಬಾಕಿ ಕೊಡಿಸದ ಸರ್ಕಾರದ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ವ್ಯಕ್ತವಾದ ಅಭಿಪ್ರಾಯಗಳಿವು.

ನಾಮ ಹಾಕುವುದನ್ನು ಬಿಡಲಿ
ಕಬ್ಬು ಬೆಳೆದವರ ಬಾಳು ಗಬ್ಬಾಗಿದೆ. ಪ್ರತಿವರ್ಷ ವೈಜ್ಞಾನಿಕ ಬೆಂಬಲ ಬೆಲೆ, ನಿಗದಿತ ವೇಳೆಯಲ್ಲಿ ಕಬ್ಬಿನ ಹಣಕ್ಕಾಗಿ ಹೋರಾಟ, ಕೂಗಾಟ ಸಾಕಾಗಿದೆ. ಇದರಿಂದ ಕಬ್ಬು ಕಟಾವು ಕೂಲಿ ಕಾರ್ಮಿಕರಿಗೂ ತೊಂದರೆ ಆಗುತ್ತಿದೆ. ಕಾರ್ಖಾನೆ ನಷ್ಟದ ನೆಪ ಹೇಳಿದರೆ, ರೈತರ ಹೆಸರಿನಲ್ಲಿ ಅಧಿಕಾರ ಹಿಡಿದವರು ಮಾತನಾಡುವುದೇ ಇಲ್ಲ. ಆ ಮನ್ನಾ ಈ ಮನ್ನಾ ಎಂದು ನಾಮ ಹಾಕುವ ಬದಲು ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಮುಂದಾಗಲಿ.
ಕಾಳಮ್ಮ ಗೊಲ್ಲರಕೊಪ್ಪಲು ಕಿಕ್ಕೇರಿ

ಕಾನೂನು ಜಾರಿಯಾಗಲಿ
ರೈತರು ಸಾಲಸೋಲ ಮಾಡಿ ಕಬ್ಬು ಬೆಳೆದು ಕಾರ್ಖಾನೆಗೆ ಸಾಗಿಸಿದ್ದು, ಹಣ ಪಡೆಯಲು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿರುವುದು ದುರಂತ. ಬ್ಯಾಂಕ್‌ನಿಂದ ಸಾಲ ಪಡೆದು ಬೆಳೆ ಹಾಕಿದ್ದು, ಆ ಬಡ್ಡಿ ಹಣ ಕಟ್ಟಲಾಗುತ್ತಿಲ್ಲ. ಸರ್ಕಾರಗಳು ಕಾರ್ಖಾನೆಗಳ ಬಗ್ಗೆ ಮೃದು ಧೋರಣೆ ತಾಳದೆ, ಆಡಳಿತ ಮಂಡಳಿಗೆ ಮೂಗುದಾರ ಹಾಕಿ, ಸಕಾಲಕ್ಕೆ ಹಣ ಕೊಡಿಸಲು ಇನ್ನಾದರೂ ಕಾನೂನು ಜಾರಿಗೆ ತರಲಿ.
ಬಿ.ಕೆ.ಪುಟ್ಟಸ್ವಾಮಿ ರೈತ ಬೊಪ್ಪಸಮುದ್ರ

ರೈತ ಹೆಸರಿಗಷ್ಟೇ ಬೆನ್ನೆಲುಬು
ರೈತರ ಬೆನ್ನೆಲುಬು ಎಂದೇಳಿಕೊಂಡು ಅಧಿಕಾರಕ್ಕೆ ಬರುವ ಸರ್ಕಾರಗಳು ರೈತರ ಸಂಕಷ್ಟ ಕೇಳದಿರುವುದು ಸಾಮಾನ್ಯ. ರೈತ ಚುನಾವಣೆ ಸಂದರ್ಭದಲ್ಲಿ ಮಾತ್ರ ಬೆನ್ನೆಲುಬು. ಇದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಹೊರತಾಗಿಲ್ಲ. ಸರ್ಕಾರಗಳಿಗೆ ರೈತರ ಮೇಲೆ ಕಾಳಜಿ ಇದ್ದರೆ ಕಬ್ಬಿಗೆ ದರ ನಿಗದಿ ಮತ್ತು ಇತರೆ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿ ಮಾಡಲಿ ಮತ್ತು ರೈತರ ಕಬ್ಬಿನ ಬಾಕಿ ಹಣ ಪಾವತಿಸಲು ಕ್ರಮಕೈಗೊಳ್ಳಲಿ.
ಸವಿತಾ ರೈತ ಮಹಿಳೆ ಪಾಂಡವಪುರ

ಜಿಲ್ಲೆಯಲ್ಲಿ ಕಬ್ಬು ಬೆಳೆದ ರೈತ ಆತ್ಮಹತ್ಯೆ ಹಾದಿ ತುಳಿಯಲು ಚುನಾಯಿತ ಪ್ರತಿನಿಧಿಗಳೇ ನೇರ ಕಾರಣ. ಕಬ್ಬು ಸಾಗಿಸಿದ 14 ದಿನ ಗಳಲ್ಲಿ ಹಣ ಪಾವತಿಸಬೇಕೆಂಬ ಸುಪ್ರೀಂಕೋರ್ಟ್ ತೀರ್ಪನ್ನು ಯಾರೂ ಪಾಲಿಸುತ್ತಿಲ್ಲ. ಸರ್ಕಾರ ಕೂಡ ಕ್ಯಾರೆ ಅನ್ನುತ್ತಿಲ್ಲ. ಪರಿಣಾಮ ರೈತರು ಕೃಷಿ ಬಿಟ್ಟು ಪಟ್ಟಣಕ್ಕೆ ಗುಳೆ ಹೋಗುವಂತಾಗಿದೆ. ಸಾಲ ಮನ್ನಾ ಡೈಲಾಗ್ ಬಿಟ್ಟು ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲಿ. ರೈತರೇ ಸರ್ಕಾರಕ್ಕೆ ಸಾಲ ಕೊಡುತ್ತಾರೆ.
ಜಿ.ಮಹೇಶ್ ಬೆಳಕವಾಡಿ ಮಳವಳ್ಳಿ

ಸರ್ಕಾರದಿಂದ ಜಾಣಮೌನ
ಕಬ್ಬು ಬೆಳೆದು, ಕಾರ್ಖಾನೆಗೆ ಸಾಗಿಸುವವರೆಗೆ ಕೂಲಿ, ಸಾಗಣೆ ವೆಚ್ಚ ಸೇರಿ ಹಲವು ರೀತಿಯ ಖರ್ಚುಗಳು ಇರುತ್ತವೆ. ಕಷ್ಟಪಟ್ಟು ಕಬ್ಬು ಬೆಳೆದ ರೈತರಿಗೆ ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗದೆ ನಷ್ಟವೇ ಹೆಚ್ಚುತ್ತಿದೆ. ಕಬ್ಬು ಸರಬರಾಜು ಮಾಡಿದ ಕಬ್ಬಿಗೆ 14 ದಿನದೊಳಗೆ ಹಣ ನೀಡ ಬೇಕೆಂಬ ಕಾನೂನಿದ್ದರೂ 6-7 ತಿಂಗಳು ಕಳೆದರೂ ಹಣ ನೀಡುತ್ತಿಲ್ಲ. ಸರ್ಕಾರ ಜಾಣಮೌನ ತೋರುತ್ತಿರುವುದು ಖಂಡನೀಯ.
ಕಲ್ಪಕೃಷ್ಣ ರೈತ ಮಹಿಳೆ ಮರಳಿಗ

ರೈತ ಯಾರ ಬಳಿ ಹೋಗಬೇಕು
ಗದ್ದುಗೆ ಏರಿದಾಕ್ಷಣ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುತ್ತೇವೆ ಎಂದ ಸರ್ಕಾರಕ್ಕೆ ವರ್ಷವಾಗುತ್ತಿದೆ. ಕಬ್ಬಿನ ದರ ನಿಗದಿ , ಕಾರ್ಖಾನೆಗಳ ಪುನಶ್ಚೇತನದ ಭರವಸೆ ಕನಸಾಗಿದೆ. ಕಬ್ಬಿನ ಹಣವನ್ನಾದರೂ ಕೊಡಿಸಿ ರೈತರ ಕಷ್ಟ ಕರಗಿಸಬೇಕಿದ್ದ ನಾಡದೊರೆ ದೇವರ ಮುಂದೆ ತಮ್ಮ ಸಮಸ್ಯೆಗಳನ್ನೇ ತೋಡಿಕೊಳ್ಳುವಲ್ಲಿ ತಲ್ಲೀನರಾಗಿದ್ದಾರೆ. ಹಾಗಾಗಿ ರೈತರು ಯಾರ ಬಳಿ ಹೋಗಬೇಕು?
ಕೃಷ್ಣ ಕಾರ್ಮಿಕ ಗಂಜಾಂ ಶ್ರೀರಂಗಪಟ್ಟಣ

ಗುಂಗಿನಿಂದ ಹೊರಬರಲಿ
ರಾಜಕೀಯ ಪಕ್ಷಗಳು ಚುನಾವಣೆ ಗುಂಗಿನಿಂದ ಹೊರಬಂದು ಕಬ್ಬಿನ ಹಣವನ್ನು ರೈತರಿಗೆ ತುರ್ತಾಗಿ ಕೊಡಿಸಬೇಕು. ಬರಗಾಲದಲ್ಲಿ ರೈತರ ಸಂಕಷ್ಟ ಕಡಿಮೆಯಾಗುತ್ತದೆ. ಕಾರ್ಖಾನೆ ಆಡಳಿತ ಮಂಡಳಿಗಳೂ ಕೂಡ ಮಾನವೀಯತೆ ಕಲಿಯಬೇಕು. ಇಲ್ಲದಿದ್ದರೆ ರೈತರ ಆತ್ಮಹತ್ಯೆ ಹೆಚ್ಚಾಗುತ್ತವೆ. ಆ ನಂತರ ಕಣ್ಣೊರೆಸುವುದರಿಂದ ಪ್ರಯೋಜನವಿಲ್ಲ.
ಅರುಣ್ ಲಾರಿ ಚಾಲಕ ಹರಿಹರಪುರ ಕೆ.ಆರ್.ಪೇಟೆ

ಸಾಲಮನ್ನಾ ಮಂತ್ರ ಸಾಕು
ಜಿಲ್ಲೆಯಲ್ಲಿ ಕಬ್ಬು ಬೆಳೆದು ಕಾರ್ಖಾನೆಗಳಿಗೆ ಸಾಗಿಸಿ ಹಣಕ್ಕಾಗಿ ಕಾಯುತ್ತಿರುವ ರೈತರ ಮನೆಗಳು ಹಾಳಾಗಿವೆ. ಸಾಲಮನ್ನಾ ಮಾಡಿ ರೈತರನ್ನು ಉದ್ಧಾರ ಮಾಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಈ ಮಂತ್ರ ಜಪಿಸುವುದನ್ನು ಬಿಟ್ಟು, ನಮ್ಮ ಬೆವರಿನ ಶ್ರಮಕ್ಕೆ ಬೆಲೆ ನಿಗದಿ ಮಾಡಲಿ, ಕಾರ್ಖಾನೆಗಳಿಂದ ಕೊಡಿಸಿ ರೈತರ ಮಾನ-ಪ್ರಾಣ ಉಳಿಸಿದರೆ, ನಾವು ಅವರನ್ನು ನಂಬಿ ಮತ ಹಾಕಿದ್ದಕ್ಕೆ ಸಾರ್ಥಕವಾಗುತ್ತದೆ.
ಪುಟ್ಟುಬುದ್ದಿ ಚಿಕ್ಕಮುಲಗೂಡು ಮಳವಳ್ಳಿ

ಭ್ರಮಲೋಕದಲ್ಲಿ ಮುಳುಗಿಸಿದ್ದಾರೆ
ಮುಖ್ಯಮಂತ್ರಿ, ಸಚಿವ, ಶಾಸಕರು ಜಿಲ್ಲೆ ಅಭಿವೃದ್ಧಿ ಗೆ ಸಾವಿರಾರು ಕೋಟಿ ರೂ .ಹಣ ನೀಡಿದ್ದೇವೆ ಎನ್ನುತ್ತಾರೆ. ಆದರೆ, ಅವರ ಗೆಲುವಿಗೆ ಮತ ನೀಡಿದ ರೈತರನ್ನು ಭರವಸೆಯ ಭ್ರಮಲೋಕದಲ್ಲಿ ಮುಳಗಿಸಿದ್ದೇ ಅವರ ಸಾಧನೆ. ಈ ತನಕ ಕಬ್ಬಿಗೆ ದರ ನಿಗದಿ ಮಾಡಿಲ್ಲ, ಹಿಂದಿನ ಬಾಕಿ ಹಣದ ಪಾವತಿ ಬಗ್ಗೆ ಚಕಾರವೆತ್ತಿಲ್ಲ. ರಾಜಕೀಯ ಕಿತ್ತಾಟದಲ್ಲಿ ಮೈತ್ರಿ ಸರ್ಕಾರ ರೈತರನ್ನು ಮರೆತಿದೆ. ರಾಜಕೀಯ ಪಕ್ಷಗಳು ರೈತರ ಪರ ಎನ್ನುವುದು ಮಾತಿಗಷ್ಟೇ? .
ಮಂಜು ಕೆ.ಆರ್.ಸಾಗರ ಶ್ರೀರಂಗಪಟ್ಟಣ

ಕಾನೂನು ಗಟ್ಟಿಯಾಗಲಿ
ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ನೆಪಮಾತ್ರಕ್ಕೆ ರೈತರ ಹೆಸರೇಳುತ್ತವೆ. ಮತ ನೀಡುವುದಕ್ಕೆ ಮಾತ್ರ ರೈತರು. ನಂತರ ಅವರ ಸಂಬಂಧಗಳೆಲ್ಲಾ ಕಾರ್ಖಾನೆ ಮಾಲೀಕರು, ದೊಡ್ಡ ದೊಡ್ಡ ಉದ್ಯಮಿಗಳು. ಆದ್ದರಿಂದಲೇ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಕೇಂದ್ರದವರು ರಾಜ್ಯದತ್ತ, ರಾಜ್ಯದವರು ಕೇಂದ್ರದತ್ತ ಬೊಟ್ಟು ಮಾಡುವುದನ್ನು ಬಿಟ್ಟು ಸ್ವಾಮಿನಾಥನ್ ವರದಿ ಜಾರಿಮಾಡಿ ತಾವು ರೈತರ ಪರ ಎಂಬುದನ್ನು ಸಾಬೀತು ಮಾಡಲಿ.
ರಮೇಶ್ ಗ್ರಾ.ಪಂ. ಮಾಜಿ ಅಧ್ಯಕ್ಷ ಕೀಲಾರ ಮಂಡ್ಯ
 

Leave a Reply

Your email address will not be published. Required fields are marked *