ಬೆಂಗಳೂರು: ದಿನವಿಡೀ ಉದ್ಯಾನಗಳನ್ನು ಸಾರ್ವಜನಿಕರಿಗೆ ತೆರದಿಡುವ ಉಪಮುಖ್ಯಮಂತ್ರಿಯವರ ನಿರ್ಧಾರಕ್ಕೆ ನಗರದ ಬಿಜೆಪಿ ಶಾಸಕರು ಹಾಗೂ ನಾಗರಿಕ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ತೀರ್ಮಾನದ ಬದಲು ಹಿಂದಿನಂತೆ ಸಮಯ ನಿಗದಿ ಅನ್ವಯ ಉತ್ತಮ ನಿರ್ವಹಣೆಯೊಂದಿಗೆ ಪಾರ್ಕ್‌ಗಳನ್ನು ಜೋಪಾನ ಮಾಡಲಿ ಎಂದು ಆಗ್ರಹಿಸಲಾಗಿದೆ.
ಉದ್ಯಾನಗಳನ್ನು ಬೆಳಗ್ಗೆ 5ರಿಂದ ರಾತ್ರಿ 10ರ ವರೆಗೂ ಸಾರ್ವಜನಿಕರಿಗೆ ತೆರೆದಿಡುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ. ಮುಖ್ಯವಾಗಿ ಪಾರ್ಕ್‌ಗಳ ನಿರ್ವಹಣೆಗೆ ಸಮಯವೇ ಸಿಗುವುದಿಲ್ಲ. ಜನರ ಓಡಾಟದ ಮಧ್ಯೆ ಗಿಡಗಳಿಗೆ ನೀರು ಹಾಯಿಸುವುದು, ಬೆಳೆದ ಕಳೆ ಸಸ್ಯಗಳನ್ನು ತೆಗೆಯುವುದು ಇತ್ಯಾದಿ ಕಾರ್ಯವನ್ನು ಸಮರ್ಪಕವಾಗಿ ಮಾಡಲು ಮಾಲಿಗಳಿಗೆ ಸಾಧ್ಯವಾಗದು. ಹೆಚ್ಚಿನ ಪಾರ್ಕ್‌ಗಳಲ್ಲಿ ನಿರ್ವಹಣೆಗೆ ಕಡಿಮೆ ಸಂಖ್ಯೆಯ ಸಿಬ್ಬಂದಿಗಳು ಇರುವುದರಿಂದ ಹೆಚ್ಚುವರಿ ಸಮಯಕ್ಕೆ ಅಧಿಕ ಮಾಲಿಗಳು ಹಾಗೂ ಭದ್ರತೆ ಕಾಯುವವರನ್ನು ನಿಯೋಜಿಸಲು ಸಾಧ್ಯವಾಗದು. ಇರುವ ಸಿಬ್ಬಂದಿಯಲ್ಲೇ ನಿರ್ವಹಿಸಿದರೂ ನಿತ್ಯವೂ 12-15 ಗಂಟೆ ದುಡಿಯುವುದು ಸಾಧ್ಯವಾಗದು ಎಂಬ ಆಕ್ಷೇಪವನ್ನು ಹಲವು ನಾಗರಿಕ ಕ್ಷೇಮಾಭಿವೃದ್ಧಿ ಸಂಘಗಳು ಡಿಸಿಎಂ ನಿರ್ಧಾರಕ್ಕೆ ಅಪಸ್ವರ ಎತ್ತಿವೆ.
ಶಾಸಕರಿಂದ ಮುಖ್ಯ ಆಯುಕ್ತರಿಗೆ ಮನವಿ:
ಬಿಬಿಎಂಪಿ ವ್ಯಾಪ್ತಿಯಲ್ಲಿ 1,250ಕ್ಕೂ ಹೆಚ್ಚು ಪಾರ್ಕ್‌ಗಳು ಇವೆ. ಇವುಗಳಲ್ಲಿ ಸಾವಿರದಷ್ಟು ಉತ್ತಮವಾಗಿ ಅಭಿವೃದ್ಧಿಗೊಂಡು ನಾಗರಿಕ ಸೇವೆಗೆ ತೆರೆದುಕೊಂಡಿವೆ. ಕೆಲವೊಂದನ್ನು ಹೊರತುಪಡಿಸಿ ಇನ್ನಿತರ ಕಡೆಗಳಲ್ಲಿ ನಿತ್ಯವೂ ದೊಡ್ಡ ಸಂಖ್ಯೆಯಲ್ಲಿ ವಾಯುವಿಹಾರಿಗಳು ಆಗಮಿಸಿ ವಾಕಿಂಗ್, ಜಾಗಿಂಗ್ ಬಳಿಕ ವ್ಯಾಯಾಮ ಮಾಡಿ ಕೆಲಹೊತ್ತು ಅಲ್ಲೇ ವಿಶ್ರಾಂತಿ ಪಡೆಯುತ್ತಾರೆ. ಆನಂತರ ನಾಗರಿಕರು ತಮ್ಮ ಮನೆಗಳಿಗೆ ತೆರಳುವುದುಂಟು. ಈ ದಿನಚರಿ ಬೆಳಗ್ಗೆ 5ರಿಂದ 10 ಹಾಗೂ ಸಂಜೆ 4ರಿಂದ ರಾತ್ರಿ 9ರ ವರೆಗೆ ಸಮಯ ನಿಗದಿ ಮಾಡಿರುವುದು ಸರಿಯಿದೆ. ಸಮಯ ವಿಸ್ತರಣೆ ಮಾಡಿದರೆ ನಿರ್ವಹಣೆ ಕಷ್ಟವಾಗುವ ಜತೆಗೆ ಪೋಲಿ-ಪಟಾಲಂ ಅಲ್ಲೇ ಬೀಡು ಬಿಟ್ಟು ನಾಗರಿಕರ ನೆಮ್ಮದಿಯನ್ನು ಹಾಳುಗೆಡುವುದುಂಟು. ಜತೆಗೆ ಅಪರಾಧ ಚಟುವಟಿಕೆಯಲ್ಲಿ ನಿರತರವಾಗುವವರು ಇಲ್ಲೇ ಠಿಕಾಣಿ ಹೂಡುವ ಸಾಧ್ಯತೆ ಇರುತ್ತದೆ. ಮೇಲಾಗಿ ಸಮಯ ವಿಸ್ತರಣೆ ಮಾಡುವಂತೆ ಯಾವೊಬ್ಬ ನಾಗರಿಕನೂ ಪಾಲಿಕೆಗೆ ಮನವಿ ಮಾಡಿಲ್ಲ. ಬೇಕಿದ್ದರೆ ಇನ್ನೂ ಒಂದು ಗಂಟೆ ವಿಸ್ತರಿಸಿ ಹಿಂದಿನಂತೆ ಪಾರ್ಕ್‌ಗಳನ್ನು ನಿರ್ವಹಿಸಬೇಕು ಎಂಬುದಾಗಿ ಶಾಸಕ ಸಿ.ಕೆ.ರಾಮಮೂರ್ತಿ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಇನ್ನೂ ಕೆಲ ಬಿಜೆಪಿ ಶಾಸಕರು ದನಿಗೂಡಿಸಿದ್ದಾರೆ.
ಸಿಬ್ಬಂದಿಗಳಿಗೆ ಬಟವಾಡೆ ಮಾಡಲಿ:
ನಗರದ ಬಹುತೇಕ ಉದ್ಯಾನಗಳಲ್ಲಿ ಕೆಲಸ ಮಾಡುವ ಮಾಲಿಗಳು ಹಾಗೂ ಇತರ ಕೆಲಸಗಾರರನ್ನು ಗುತ್ತಿಗೆ ಮೇಲೆ ತೆಗೆದುಕೊಳ್ಳಲಾಗಿದೆ. ಕೆಲವರಿಗೆ ಪಾರ್ಕ್ ಮೂಲೆಯೊಂದರಲ್ಲಿ ಸಣ್ಣ ಕೊಠಡಿ ನೀಡಿ ಅಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಕೆಲವೆಡೆ ದಂಪತಿಗಳಿಬ್ಬರೇ ಪಾರ್ಕ್ ನಿರ್ವಹಣೆ ಮಾಡುತ್ತಿದ್ದು, ಸಮರ್ಪಕವಾಗಿ ಪಗಾರ ನೀಡುತ್ತಿಲ್ಲ. ಗುತ್ತಿಗೆದಾರರು ವಾರ್ಷಿಕ ಗುತ್ತಿಗೆ ಹಣ ಪಡೆಯಲು ಅಲೆದಾಟ ನಡೆಸಬೇಕಿರುವ ಕಾರಣ ಸಿಬ್ಬಂದಿಗಳಿಗೂ ಸಮಯಕ್ಕೆ ಸರಿಯಾಗಿ ಬಟವಾಡೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ. ಈ ಸಮಸ್ಯೆಯನ್ನು ನಿವಾರಿಸಿ ಎಲ್ಲ ದೊಡ್ಡ ಉದ್ಯಾನಗಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ನಾಗರಿಕ ಸಂಘಟನೆಗಳು ಪಾಲಿಕೆಯನ್ನು ಆಗ್ರಹಿಸಿವೆ.