ಧಾರವಾಡ: ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮತ್ತು ಖರೀದಿ ಹಾಗೂ ಬಗರ್‌ಹುಕುಂ ಸಾಗುವಳಿದಾರರಿಗೆ ಜಮೀನು ಮಂಜೂರು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಬೆಳೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಹೋಗಲಾಡಿಸಬೇಕು. ಬೆಳೆ ವಿಮೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ನಗರದ ಹೂವು ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸಬೇಕು. ರೈತರ ಖಾತೆಗೆ ಜಮೆಯಾದ ಪರಿಹಾರದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು. ಕಳಪೆ ಬಿತ್ತನೆ ಬೀಜ ಮಾರುವ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸೋಯಾಬೀನ್ ಖರೀದಿಗೆ ಒತ್ತಾಯ:
ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಬೆಂಬಲ ಬೆಲೆಯಡಿ ಸೋಯಾಬೀನ್ ಖರೀದಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಧಾರವಾಡ ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದರು. ಆದರೆ, ಸುಮಾರು 500 ರೈತರಿಂದ ಖರೀದಿ ಮಾಡಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ನೋಂದಾಯಿಸಿಕೊಂಡಿದ್ದ 500 ರೈತರಿಗೆ ಅನ್ಯಾಯವಾಗಿದೆ. ಕೂಡಲೇ ಖರೀದಿ ಪ್ರಕ್ರಿಯೆ ಆರಂಭಿಸದಿದ್ದರೆ ಸಲನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಿಕೊಂಡು ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈರಪ್ಪ ಕಂಕೊಳ್ಳಿ, ಮಲ್ಲಿಕಾರ್ಜುನಗೌಡ ಬಾಳನಗೌಡರ, ಶರದ್ ಅಂಬೊಳ್ಳಿ, ಇಮ್ತಿಯಾಜ ಪಾಟೀಲ, ಪ್ರಸಾದ ಕಂಬಾರಗಣವಿ, ಪುಂಡಲೀಕ ಬೈಲೂರು, ರೇಣುಕಾ ಗೋಣೆಪ್ಪನವರ, ಬಸಮ್ಮ ಅಣ್ಣಿಗೇರಿ, ಸಾವಿತ್ರಿ ಸಿದ್ದಣ್ಣವರ, ಶೋಭಾ ಬಡಿಗೇರ, ಮಲ್ಲಪ್ಪ ಶಿರಮಣ್ಣವರ, ಮೈಲಾರ ಸಂಗೊಳ್ಳಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.