ಬೆಲೆಯ ಬಲೆಯಲ್ಲಿ ಚಿತ್ರಕಲೆ

ಹೇರಳ ಹಣವುಳ್ಳವರು ಹೂಡಿಕೆ ಮಾಡುವ ಮೊದಲ ಆದ್ಯತೆಯ ಕ್ಷೇತ್ರಗಳೆಂದರೆ ರಿಯಲ್ ಎಸ್ಟೇಟ್ ಹಾಗೂ ಷೇರು ಮಾರುಕಟ್ಟೆ. ನಂತರದ ಸ್ಥಾನವಿರುವುದೇ ಚಿತ್ರಕಲಾಕೃತಿಗಳ ಮೇಲಿನ ಹಣ ಹೂಡುವಿಕೆಗೆ. ಇದರಿಂದ ಈ ಕ್ಷೇತ್ರದ ಆರ್ಥಿಕ ಶಕ್ತಿಯನ್ನು ಊಹಿಸಬಹುದಾಗಿದೆ.

| ಚಿ.ಸು. ಕೃಷ್ಣ ಸೆಟ್ಟಿ

ಚಿತ್ರ, ಶಿಲ್ಪ ಕಲಾವಿದರಲ್ಲಿ ಮುಖ್ಯವಾಗಿ ಎರಡು ಪ್ರಕಾರದವರಿದ್ದಾರೆ. ಮೊದಲನೆಯವರು ಆತ್ಮತೃಪ್ತಿಗಾಗಿ ಕಲಾಕೃತಿಗಳನ್ನು ರಚಿಸಿದರೆ, ಎರಡನೆಯ ಪ್ರಕಾರದವರು ಸಮಾಜದ ಆಶಯಗಳಿಗೆ ಪೂರಕವಾಗಿ ಕೃತಿಗಳನ್ನು ರಚಿಸಿ ಅವುಗಳ ಮಾರಾಟವನ್ನು ಬಯಸುವವರು. ಈ ಪ್ರಕಾರದವರು ಹಲವೊಮ್ಮೆ ಮಾರಾಟಕ್ಕಾಗಿ ಬೇಕಾದ ರಾಜಿಗಳನ್ನೂ ಮಾಡಿಕೊಳ್ಳುತ್ತಾರೆ. ಮೊದಲನೆಯ ಪ್ರಕಾರದವರು ಗಂಭೀರ ಕಲಾವಿದರಾಗಿದ್ದು, ತಮಗೆ ಬೇಕೆನಿಸಿದಂತೆ ಕೃತಿಗಳನ್ನು ರಚಿಸಿದರೂ, ಯಾರಾದರೂ ಕೊಳ್ಳುಗರು ಬಯಸಿದರೆ ಮಾರಲು ಸಿದ್ಧವಿರುತ್ತಾರೆ. ಇವರು ಏರ್ಪಡಿಸುವ ಕಲಾಪ್ರದರ್ಶನಗಳ ಹಿಂದಿನ ಆಶಯ ಇದೇ ಆಗಿರುತ್ತದೆ. ಹೀಗೆ ಎರಡೂ ಪ್ರಕಾರಗಳವರ ಉದ್ದೇಶ, ದಾರಿಗಳು ಬೇರೆಯಾದರೂ ಅಂತಿಮವಾಗಿ ಕೃತಿಗಳು ಮಾರಾಟಕ್ಕೆ ಲಭ್ಯವಿರುತ್ತವೆ.

ಇನ್ನು, ಕೊಳ್ಳುಗರಲ್ಲಿಯೂ ಮುಖ್ಯವಾಗಿ ಎರಡು ಪ್ರಕಾರದವರಿರುತ್ತಾರೆ. ಮೊದಲನೆಯವರು ಆ ಕೃತಿ, ಕಲಾವಿದನಿಂದ ಆಕರ್ಷಿತರಾಗಿ, ಸ್ವಸಂತೋಷಕ್ಕಾಗಿ ಅದನ್ನು ತಮ್ಮ ಮನೆ ಅಥವಾ ಕಚೇರಿಯಲ್ಲಿ ತೂಗುಹಾಕಿಕೊಂಡು ಹೆಮ್ಮೆ ಪಡುವವರು. ಎರಡನೆಯ ಪ್ರಕಾರದವರು ಕೃತಿಯಿಂದ ಆಕರ್ಷಿತರಾದರೂ ಮುಖ್ಯವಾಗಿ ಅದನ್ನು ಒಂದು ಹೂಡಿಕೆಯ ದೃಷ್ಟಿಯಿಂದ ನೋಡುವವರು.

ಕಲಾಕೃತಿಗಳು ಅತ್ಯಧಿಕ ಬೆಲೆಗೆ ಮಾರಾಟವಾಗುವ ಕಲಾವಿದರಲ್ಲಿ ಇಂಗ್ಲೆಂಡಿನಲ್ಲಿರುವ ಭಾರತ ಸಂಜಾತ ಕಲಾವಿದ ಅನಿಶ್ ಕಪೂರ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ವಿ.ಎಸ್. ಗಾಯ್ತೊಂಡೆ, ತೈಯಬ್ ಮೆಹ್ತಾ, ಫ್ರಾನ್ಸಿಸ್ ಸೌಜಾ, ಹುಸೇನ್, ಎಸ್.ಎಚ್.ರಜಾ, ಅಕ್ಬರ್ ಪದಮ್ೕ, ಅಮೃತಾ ಶೇರ್​ಗಿಲ್ ಮುಂತಾದವರ ಪ್ರತಿಯೊಂದು ಕೃತಿಗಳು ಹತ್ತು ಕೋಟಿ ರೂಪಾಯಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗಿವೆ. ವಿಶ್ವಾದ್ಯಂತ ಕಲಾಕೃತಿಗಳ ಹರಾಜು ಮಾಡುವ ಕ್ರಿಸ್ಟೀಸ್, ಸದ್​ಬೀ ಹರಾಜುಗಳಲ್ಲಿಯೂ ವರ್ಷದಿಂದ ವರ್ಷಕ್ಕೆ ಈ ಮೊತ್ತ ಮೇಲಕ್ಕೆ ಏರುತ್ತಲೇ ಇದೆ. ಹಾಗಿದ್ದರೂ ಎಲ್ಲ ಕಲಾವಿದರ, ಎಲ್ಲ ಕಲಾಕೃತಿಗಳಿಗೂ ಈ ಪ್ರಮಾಣದ ಬೆಲೆ, ಬೇಡಿಕೆ ಇರುವುದಿಲ್ಲ. ಇದಕ್ಕೆ ಕಾರಣಗಳು ಹಲವು. ವಿಶ್ವಾದ್ಯಂತ ಈ ಶತಮಾನದ ಆರಂಭದ ವರ್ಷಗಳಲ್ಲಿ ಕಲಾಕೃತಿಗಳಿಗೆ ಕೃತಕ ಬೆಲೆ ಏರಿಕೆ ಉಂಟಾಗಿ ಬಹುತೇಕ ಸಾಮಾನ್ಯ ಕಲಾವಿದರೂ ಲಕ್ಷ ಲಕ್ಷ ಹಣ ಬಾಚಿದರು. ಅನೇಕ ಅನಾಮಧೇಯರೂ ದಿಢೀರ್ ಶ್ರೀಮಂತರಾಗಿ ಕಲಾವಿದರಿಗೆ ಸೆಲಬ್ರಿಟಿ ಸ್ಟೇಟಸ್ ಬಂತು. ಆದರೆ, 2008ರ ಸುಮಾರಿಗೆ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಈ ಕೃತಕ ಬೆಲೆಯ ನೀರ್ಗಳ್ಳೆ ಒಡೆದು ಕಲೆಯ ಮಾರುಕಟ್ಟೆ ನೆಲಕಚ್ಚಿತು. ತನ್ಮೂಲಕ ಸಾವಿರಾರು ಕಲಾವಿದರ ಹಣ ಮಾಡುವ ಕನಸು ನುಚ್ಚುನೂರಾಯಿತು. ಅಂದಿನಿಂದ ಸುಮಾರು 10-11 ವರ್ಷಗಳ ಈ ಅವಧಿಯಲ್ಲಿ ಕಲಾ ಮಾರುಕಟ್ಟೆ ಕುಂಟುತ್ತ ಸಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಈ ಪರಿ ಬೆಲೆಗೆ ಏನು ಕಾರಣ?

ಕಲಾ ಮಾರುಕಟ್ಟೆ ಮುಗ್ಗರಿಸಿದ ಈ ದಿನಗಳಲ್ಲೂ ಕೆಲವರ ಕೃತಿಗಳು ಹಿಂದಿನಂತೆಯೇ ಕೋಟಿ ಕೋಟಿ ಳಿಸುತ್ತಿವೆ. ಇದಕ್ಕೆ ಕಾರಣ ಏನೆಂದು ನಿಖರವಾಗಿ ಹೇಳಲಾಗದಿದ್ದರೂ ವಾಸ್ತವದಲ್ಲಿ ನಿಜಕೃತಿಗಳಿಗೆ ಬೆಲೆ ಇದ್ದೇ ಇದೆ. ಕಲಾವಿದರ ಬ್ರ್ಯಾಂಡಿಂಗ್, ಅಪರೂಪದ, ಅನನ್ಯ ಕೃತಿಗಳು ಇದಕ್ಕೆ ಒಂದು ಕಾರಣವಾದರೆ, ಕೃತಿಗಳ ಗುಣಮಟ್ಟ ಹಾಗೂ ಲಭ್ಯತೆ ಇನ್ನೊಂದು ಕಾರಣ. ಇಂದು ಭಾರಿ ಬೆಲೆಗೆ ಮಾರಾಟವಾಗುತ್ತಿರುವ ಕಲಾವಿದರಲ್ಲಿ ಬಹುತೇಕ ಎಲ್ಲರೂ ದಿವಂಗತರೇ. ಅವರ ಹೊಸ ಕೃತಿಗಳ ರಚನೆ ಸಾಧ್ಯವಿಲ್ಲದ ಕಾರಣ, ಹಿಂದೆ ರಚಿಸಿದ ಕೆಲವೇ ಸಂಖ್ಯೆಯ ಕೃತಿಗಳಿಗೆ ಬೆಲೆ ಹೆಚ್ಚಾಗುತ್ತಲೇ ಇರುತ್ತದೆ. ಷೇರು ಮಾರುಕಟ್ಟೆಯ ಬೆಲೆಗಳು ಹೇಗೆ ನಿಗೂಢವಾಗಿರುತ್ತವೆಯೋ ಹಾಗೆಯೇ ಈ ಕಲಾವಿದರ ಪಟ್ಟಿ ಕೂಡ. ಕೆಲವೊಮ್ಮೆ ಚೆನ್ನಾಗಿ ಮಾರಾಟ ಮಾಡಿದ ಕಲಾವಿದರು ಮತ್ತೆ ಮೂಲೆಗುಂಪಾದ ಉದಾಹರಣೆಗಳೂ ಇವೆ. ಹಲವೊಮ್ಮೆ ಮಾರುಕಟ್ಟೆ ತಂತ್ರಗಳ ಮೂಲಕ ಕೃತಿಗಳಿಗೆ ಕೃತಕ ಬೆಲೆ ಸೃಷ್ಟಿಯಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ನಿಜ ಮೌಲ್ಯಮಾಪಕ ತಜ್ಞರ ಸಲಹೆ ಪಡೆದು ಖರೀದಿ ಮಾಡುವುದು ಒಳಿತು.

ಈಗಲೂ ಆಧುನಿಕ ಹಾಗೂ ಸಮಕಾಲೀನ ಕಲಾವಿದರ ಕೃತಿಗಳೇ ತುಂಬ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ಇವರು ತಮ್ಮ ಅನನ್ಯ ಕೃತಿಗಳಿಂದ ಬ್ರ್ಯಾಂಡ್ ಇಮೇಜ್ ಪಡೆದವರು. ಅವರಲ್ಲಿ ಹೆಚ್ಚಿನವರು ತಮ್ಮ ಕೃತಿಗಳ ಮಾರಾಟಕ್ಕೆ ವಾಣಿಜ್ಯ ಗ್ಯಾಲರಿಗಳ ಸಹಾಯ ಅಥವಾ ಪಬ್ಲಿಕ್ ರಿಲೇಷನ್ಸ್ ಏಜೆಂಟರನ್ನು ನೇಮಿಸಿಕೊಂಡ ಉದಾಹರಣೆಗಳೂ ಇವೆ! ಈ ಕೃತಿಗಳನ್ನು ರಚಿಸುವವರು ಕಲಾವಿದರಾದರೂ ಅದರ ಮಾರುಕಟ್ಟೆ ವ್ಯವಸ್ಥೆ ನೋಡಿಕೊಳ್ಳುವವರು ಬೇರೆಯೇ ಇರುತ್ತಾರೆ. ವಾಣಿಜ್ಯ ಗ್ಯಾಲರಿಗಳವರು ಕೂಡ ಗಮನಾರ್ಹ ಕಲಾವಿದರನ್ನು ಗುರುತಿಸಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ತಮ್ಮ ಗ್ಯಾಲರಿಯ ಮೂಲಕವೇ ಕೃತಿಗಳು ಮಾರಾಟವಾಗುವಂತೆ ನೋಡಿಕೊಳ್ಳುತ್ತಾರೆ. ಹೀಗೆ ಒಪ್ಪಂದ ಮಾಡಿಕೊಂಡವರು ಬೇರೆ ಗ್ಯಾಲರಿಗಳಿಗೆ ತಮ್ಮ ಕೃತಿಗಳನ್ನು ಕೊಡುವಂತಿಲ್ಲ. ಈ ಗ್ಯಾಲರಿಗಳವರು ಅಂತಾರಾಷ್ಟ್ರೀಯ ಬಿನಾಲೆ (ಎರಡು ವರ್ಷಕ್ಕೊಮ್ಮೆ ನಡೆಯುವ ಕಲಾ ಪ್ರದರ್ಶನ) ಹಾಗೂ ಪ್ರತಿಷ್ಠಿತ ಆರ್ಟ್​ಫೇರ್​ಗಳಲ್ಲಿ ಇವರ ಕೃತಿಗಳನ್ನು ಪ್ರದರ್ಶಿಸಿ, ಮಾರಾಟ ಮಾಡಿ ಶೇ. 35ರಿಂದ ಶೇ.50ರವರೆಗೆ ಕಮಿಷನ್ ಪಡೆಯುತ್ತಾರೆ.

ಬಹುತೇಕ ಗ್ಯಾಲರಿಗಳವರು ಕೃತಿಯನ್ನು ಯಾರಿಗೆ ಮಾರಾಟ ಮಾಡಿದ್ದಾರೆಂಬ ಗುಟ್ಟು ಬಿಟ್ಟುಕೊಡುವುದಿಲ್ಲ. ಕೆಲವು ದುರಾಸೆಯ ಗ್ಯಾಲರಿಗಳವರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕಲಾವಿದರಿಗೆ ಸುಳ್ಳು ಹೇಳಿ ಕಡಿಮೆ ಹಣ ನೀಡಿರುವ ಉದಾಹರಣೆಗಳೂ ಇವೆ. ದೆಹಲಿ, ಮುಂಬೈ, ಕೋಲ್ಕತ, ಚೆನ್ನೈ, ಬೆಂಗಳೂರು ಮುಂತಾದ ನಗರಗಳಲ್ಲಿ ಈ ವಾಣಿಜ್ಯ ಗ್ಯಾಲರಿಗಳ ಸಂಖ್ಯೆ ಬಹಳಷ್ಟಿದ್ದು, 2008ರ ಹಿನ್ನಡೆಯ ನಂತರ ಬಹುತೇಕ ಗ್ಯಾಲರಿಗಳು ಮುಚ್ಚಿವೆ. ಇನ್ನು ಕೆಲವರು ಆನ್​ಲೈನ್, ಡಿಜಿಟಲ್ ಮಾರ್ಕೆಟಿಂಗ್ ಕಡೆಗೆ ಸಾಗಿದ್ದಾರೆ. ಕೆಲವು ಕಲಾವಿದರು ಸ್ವತಃ ವೆಬ್​ಸೈಟ್ ಮಾಡಿಕೊಂಡು ಆನ್​ಲೈನ್​ನಲ್ಲಿ ಮಾರಾಟ ಮಾಡುವ ಪ್ರಕ್ರಿಯೆಯೂ ಈಚೆಗೆ ಹೆಚ್ಚುತ್ತಿದೆ.

ಸಾಮಾನ್ಯರನ್ನೂ ತಲುಪಿರುವ ಕಲೆ: ಇಂದು ಸಾಮಾನ್ಯರಲ್ಲಿಯೂ ಕೃತಿಗಳನ್ನು ಕೊಳ್ಳಬೇಕೆಂಬ ಬಯಕೆ ಕ್ರಮೇಣ ಬೆಳೆಯುತ್ತಿದೆ. ಹಿಂದಿನ ಹಲವಾರು ದಶಕಗಳಿಗೆ ಹೋಲಿಸಿದರೆ ಇಂದು ಮಧ್ಯಮ ವರ್ಗದವರ ಬಳಿಯೂ ಅಗತ್ಯಕ್ಕಿಂತ ಹೆಚ್ಚು ಹಣ ಓಡಾಡುತ್ತಿದೆ. ಹಾಗಾಗಿ, ಮಧ್ಯಮವರ್ಗದವರೂ ಕೃತಿಗಳನ್ನು ಖರೀದಿಸುತ್ತಿದ್ದಾರೆ. ಪ್ರಸಾರ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲೂ ಕಲಾಕೃತಿಗಳ ಕುರಿತು ಜಾಗೃತಿ ಮೂಡುತ್ತಿದೆ.

ಇದಕ್ಕೆ ಪೂರಕವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ತು 2003ರಲ್ಲಿ ‘ಚಿತ್ರಸಂತೆ’ ಎಂಬ ಹೊಸ ಪರಿಕಲ್ಪನೆಯೊಂದಿಗೆ ವರ್ಷದಲ್ಲೊಂದು ದಿನ ರಸ್ತೆಯಲ್ಲಿ ಕೃತಿಗಳ ಮಾರಾಟಕ್ಕೆ ದಾರಿ ಮಾಡಿಕೊಟ್ಟಿತು. ಇದು ಗ್ಯಾಲರಿಗಳಲ್ಲಿನ ದುಬಾರಿ ಮಾರಾಟಕ್ಕೆ ಬ್ರೇಕ್ ಹಾಕಿದ ಬಗ್ಗೆ ಹಲವು ಹಿರಿಯ ಕಲಾವಿದರಲ್ಲಿ ಅಸಮಾಧಾನ ಮೂಡಿದ್ದರೂ, ಉದಯೋನ್ಮುಖ ಬಡ ಕಲಾವಿದರಿಗೆ ಒಳ್ಳೆಯ ವೇದಿಕೆಯಾಗಿದೆ. ರಾಜ್ಯದ ಹಲವು ಪ್ರಮುಖ ನಗರಗಳಲ್ಲಿಯೂ ಬೇರೆ ಬೇರೆ ಹೆಸರುಗಳಲ್ಲಿ ಈ ಚಿತ್ರಸಂತೆಯ ಕಲ್ಪನೆ ಮುಂದುವರಿದಿದೆ. ರಾಜ್ಯದ ಕಲಾವಿದರಿಗಷ್ಟೇ ಸೀಮಿತವಾಗಿದ್ದ ಬೆಂಗಳೂರಿನ ಚಿತ್ರಸಂತೆ ಇಂದು ಬೇರೆ ರಾಜ್ಯಗಳ ಕಲಾವಿದರನ್ನೂ ಆಕರ್ಷಿಸುತ್ತಿದೆ. ಸಾವಿರಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವ ಚಿತ್ರಸಂತೆಗೆ 3-4 ಲಕ್ಷಕ್ಕೂ ಹೆಚ್ಚು ಜನ ಬರುತ್ತಿದ್ದಾರೆಂದರೆ ಇದರ ಪ್ರಭಾವವನ್ನು ಊಹಿಸಬಹುದಾಗಿದೆ. ಕಲೆಯ ಕುರಿತ ಜಾಗೃತಿ ಹಾಗೂ ಲಭ್ಯ ಕೃತಿಗಳ ಸಂಖ್ಯೆಯಿಂದಾಗಿ ಇಂದು ಚಿತ್ರಶಿಲ್ಪಗಳು ಹಿಂದೆಂದಿಗಿಂತಲೂ ಹೆಚ್ಚು ಮಾರಾಟವಾಗುತ್ತಿವೆಯಾದರೂ ಇದರ ಲಾಭ ಪಡೆಯುತ್ತಿರುವವರು ವಾಣಿಜ್ಯ ಗ್ಯಾಲರಿಗಳವರು ಹಾಗೂ ಬೆರಳೆಣಿಕೆಯಷ್ಟು ಪ್ರಸಿದ್ಧ ಕಲಾವಿದರು ಮಾತ್ರ. ಕೆಲವು ಹಿರಿಯ ಕಲಾವಿದರಂತೂ ಮಾರುಕಟ್ಟೆಯ ಗಮನವಿಲ್ಲದೆ ಕೃತಿ ರಚನೆಯಲ್ಲಿಯೇ ತೃಪ್ತಿ ಕಾಣುತ್ತಿದ್ದಾರೆ.

ಕಪ್ಪುಹಣ ಕೊಟ್ಟು ಖರೀದಿಸುವರು

ವಾಸ್ತವದಲ್ಲಿ ಕಲಾಕೃತಿಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಳ್ಳುವವರಲ್ಲಿ ಹೆಚ್ಚಿನವರು ಕಪ್ಪುಹಣ ಉಳ್ಳವರು. ತಮ್ಮ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಲು ದುಬಾರಿ ಬೆಲೆಯ ಕೃತಿಗಳನ್ನು ಪ್ರತಿಷ್ಠೆಗಾಗಿ ಕೊಂಡು, ಕಚೇರಿ, ಮನೆಗಳಲ್ಲಿ ತೂಗು ಹಾಕಿ ಹೆಮ್ಮೆಯಿಂದ ‘ನನ್ನಲ್ಲಿ …ಇಂಥವರ ಕೃತಿಗಳಿವೆ’ ಎಂದು ಬೀಗುವವರೇ ಹೆಚ್ಚು. ಹೀಗಿರುವಾಗ, 2008ರ ನಂತರದ ಮಾರುಕಟ್ಟೆಯ ಹಿನ್ನಡೆಯ ಜತೆಗೇ ದುರ್ಭಿಕ್ಷದಲ್ಲಿ ಆಧಿಕ ಮಾಸ ಬಂದಂತೆ ಈಚಿನ ಡಿಮೊನೆಟೈಸೇಷನ್ ಹಾಗೂ ಜಿಎಸ್​ಟಿ ಕೂಡ ಮಾರುಕಟ್ಟೆಗೆ ತೊಡಕಾಗಿ ಪರಿಣಮಿಸಿವೆ.

ಕಲಾಕೃತಿ ಮಾರಿ ಏರ್ ಇಂಡಿಯಾ ಬದುಕಿಸಬಹುದು!

ಇತ್ತೀಚೆಗೆ ಏರ್ ಇಂಡಿಯಾ ಸಂಸ್ಥೆ ನಷ್ಟದಲ್ಲಿರುವಾಗ ಆ ನಷ್ಟದಿಂದ ಚೇತರಿಸಿಕೊಳ್ಳಲು ಹಲವರು ಮಾಡಿದ ಸಲಹೆ ಏನೆಂದರೆ, ಅದರ ಸಂಗ್ರಹದಲ್ಲಿ ಇರುವ ಕಲಾಕೃತಿಗಳನ್ನು ಮಾರಾಟ ಮಾಡುವುದು! ಕಳೆದ ಹಲವಾರು ದಶಕಗಳಲ್ಲಿ ಏರ್ ಇಂಡಿಯಾ ಅನೇಕ ಪ್ರಮುಖ ಕಲಾವಿದರ ಕೃತಿಗಳನ್ನು ಖರೀದಿಸಿದ್ದು, ಅವುಗಳ ಮೌಲ್ಯ ಹಲವು ನೂರು ಕೋಟಿ ಮೀರುತ್ತದೆ! ಪಿಎನ್​ಬಿ ಹಗರಣದ ನೀರವ್ ಮೋದಿ ಸಂಗ್ರಹದಲ್ಲಿದ್ದ ಕಲಾಕೃತಿಗಳನ್ನು ಆದಾಯ ತೆರಿಗೆ ಇಲಾಖೆ ಹರಾಜು ಮಾಡಿದಾಗ ವಿ.ಎಸ್.ಗಾಯ್ತೊಂಡೆ ಅವರ ಚಿತ್ರವೊಂದು 25 ಕೋಟಿ ರೂ.ಗೆ, ರವಿವರ್ಮನ ಒಂದು ಕೃತಿ 16 ಕೋಟಿ ರೂ.ಗೆ ಮಾರಾಟವಾಗಿದ್ದವು.

(ಲೇಖಕರು ಮಾಜಿ ಆಡಳಿತಾಧಿಕಾರಿ ಹಾಗೂ ಅಧ್ಯಕ್ಷರು, ಕೇಂದ್ರ ಲಲಿತಕಲಾ ಅಕಾಡೆಮಿ)